ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಸಚಿವ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಅಂತಿಮಗೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ನಡೆದ ಶಾಸಕರ ಹಾಗೂ ಎಂಎಲ್ಸಿಗಳ ರಾಜೀನಾಮೆ ಹೈಡ್ರಾಮಾ ಬೆನ್ನಲ್ಲೇ ಕೆಪಿಸಿಸಿ ಎಚ್ಚೆತ್ತುಕೊಂಡಿದೆ. ಶಾಸಕರ ರಾಜೀನಾಮೆ ಪ್ರಹಸನಕ್ಕೆ ತಾತ್ಕಾಲಿಕ ತಡೆ ನೀಡುವಲ್ಲಿ ಸಫಲಗೊಂಡಿರುವ ಕೆಪಿಸಿಸಿ, ಇಂದು ರಾತ್ರಿ 10 ಗಂಟೆಗೆ ತುರ್ತು ಸಭೆ ಕರೆದಿದೆ. ಕೋಲಾರ ಟಿಕೆಟ್ ವಿಚಾರದಲ್ಲಿ ಅಸಮಾಧಾನಿತರನ್ನು ಒಳಗೊಂಡಂತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುತ್ತದೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯ ಸಂಬಂಧ ಇಂದು ರಾತ್ರಿ 10 ಗಂಟೆಗೆ ಕೆಪಿಸಿಸಿ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಎಐಸಿಸಿ ಪ್ರತಿನಿಧಿಗಳು ಹಾಗೂ ಕೋಲಾರ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
ಈಗಾಗಲೇ ಸೋರಿಕೆಯಾಗಿರುವ ಸುದ್ದಿಯ ಕುರಿತು ಚರ್ಚೆ ನಡೆಯಲಿದೆ. ಎಐಸಿಸಿ ಅಧಿಕೃತವಾಗಿ ಹೆಸರು ಪ್ರಕಟ ಮಾಡುವ ಮುನ್ನವೇ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡುವುದು ಖಂಡಿಸಿ ಶಾಸಕರು ಸಿಡಿದೆದ್ದ ವಿಚಾರದ ಬಗ್ಗೆಯೂ ಮಾತುಕತೆ ನಡೆಯಲಿದೆ. ಅಸಮಾಧಾನಿತ ಶಾಸಕರ ಅಭಿಪ್ರಾಯ, ಸಚಿವ ಮುನಿಯಪ್ಪ ಅಭಿಪ್ರಾಯವನ್ನೂ ಆಲಿಸಿ ಸಮಸ್ಯೆ ಇತ್ಯರ್ಥ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಜೀರ್ ಅಹ್ಮದ್ ಹಾಗೂ ಅನಿಲ್ ಕುಮಾರ್ ಸಭಾಪತಿ ಕೊಠಡಿಯಲ್ಲಿ ಕುಳಿತಾಗಲೇ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಬೈರತಿ ಸುರೇಶ್ ಅವರನ್ನು ಮನವೊಲಿಸಲು ಕಳುಹಿಸಿದ್ದರು. ಇಂದು ರಾತ್ರಿ ಸಭೆ ನಡೆಸಲಾಗುತ್ತದೆ ಅಲ್ಲಿಯವರೆಗೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎನ್ನುವ ಸಂದೇಶವನ್ನೂ ಕಳುಹಿಸಿದ್ದರು. ರಾಜ್ಯ ನಾಯಕರ ಸಲಹೆ ಮೇರೆಗೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವ ಪರಿಷತ್ ಸದಸ್ಯರು ಮತ್ತು ಶಾಸಕರು ರಾತ್ರಿಯ ಸಭೆಯ ನಿರೀಕ್ಷೆಯಲ್ಲಿದ್ದಾರೆ.
ಇಂದು ರಾತ್ರಿ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಕೋಲಾರ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಒಮ್ಮತದ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಇನ್ನು ಕೋಲಾರ ಟಿಕೆಟ್ ಅಧಿಕೃತವಾಗಿ ಪ್ರಕಟ ಆಗಿಲ್ಲ. ಎಐಸಿಸಿ ಅಧ್ಯಕ್ಷರು ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, "ಟಿಕೆಟ್ ನಿರ್ಧಾರವಾಗಿಲ್ಲ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸೋಣ" ಎಂದಿದ್ದಾರೆ. ಹಾಗಾಗಿ ಇಂದಿನ ಸಭೆಯಲ್ಲಿ ಮುನಿಯಪ್ಪ ಕುಟುಂಬದ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತಾಗಲಿದೆಯಾ? ಅಸಮಾಧಾನಿತರ ಒತ್ತಡಕ್ಕೆ ರಾಜ್ಯ ನಾಯಕರು ಮಣಿಯಲಿದ್ದಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ:ರಾಜೀನಾಮೆ ಪತ್ರ ಹಿಡಿದು ಸಭಾಪತಿ ಮುಂದೆ ಕುಳಿತಿದ್ದ ಇಬ್ಬರು ಎಂಎಲ್ಸಿಗಳ ಮನವೊಲಿಸಿದ ಬೈರತಿ ಸುರೇಶ್ - KOLAR TICKET ISSUE