ಕುಂದಾನಗರಿ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಶ್ರೀರಾಮನ ಗಾಳಿಪಟ ಬೆಳಗಾವಿ :ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಎಲ್ಲವೂ ರಾಮಮಯವಾಗಿದ್ದು, ಕುಂದಾನಗರಿ ಬೆಳಗಾವಿಯ ಬಾನಂಗಳದಲ್ಲಿ ಮೂಡಿದ ಶ್ರೀರಾಮನ ಚಿತ್ತಾರ ಆಕರ್ಷಣೀಯವಾಗಿತ್ತು.
ಹೌದು, ಬೆಳಗಾವಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಿ ಎಸ್ ಯಡಿಯೂರಪ್ಪ ರಸ್ತೆಯ ಮಾಲಿನಿ ಸಿಟಿಯಲ್ಲಿ ಆಯೋಜಿಸಿದ್ದ 14ನೇ ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲೂ ಶ್ರೀರಾಮನ ಜಪ ಜೋರಾಗಿತ್ತು. ಶ್ರೀರಾಮನ ಭಾವಚಿತ್ರ ಇರುವ ಗಾಳಿಪಟವೂ ಸೇರಿದಂತೆ ತರಹೇವಾರಿ ಗಾಳಿಪಟಗಳು ಬಾನಿನಲ್ಲಿ ಸ್ವಚ್ಛಂದವಾಗಿ ಹಾರಾಡಿ, ನೆರೆದಿದ್ದ ಜನರ ಕಣ್ಮನ ಸೆಳೆದವು.
ಜೈ ಶ್ರೀರಾಮ ಬರಹ ಮತ್ತು ಶ್ರೀರಾಮನ ಭಾವಚಿತ್ರದ ಗಾಳಿ ಪಟ, ಉದ್ದ ಹಾವು, ಚಿರತೆ, ಐ ಲವ್ ಯೂ ಇಂಡಿಯಾ ಬರಹದ, ಮೀನು, ಆನೆ, ಕೋಳಿ, ಟಾಮ್ ಆಂಡ್ ಜೆರ್ರಿ, ಕಾಂತಾರ, ಸಮುದ್ರ ಕುದುರೆ, ಬಿಗ್ ಬಲೂನ್, ಅಶೋಕ ಚಕ್ರ, ರಾಷ್ಟ್ರಧ್ವಜ, ಫೈಟರ್, ವಿ ಲವ್ ಕೈಟ್ ಬರಹ ಸೇರಿ ನಾನಾ ತರಹದ ಗಾಳಿ ಪಟಗಳು ಆಕಾಶದಲ್ಲಿ ಏಕಕಾಲಕ್ಕೆ ಹಾರಾಡುತ್ತಿರುವ ದೃಶ್ಯ ನೋಡುಗರ ಗಮನ ಸೆಳೆಯಿತು.
ಯುಕೆ, ಇಂಡೋನೇಷ್ಯಾ, ನೆದರ್ಲ್ಯಾಂಡ್, ಗ್ರೀಸ್ ದೇಶಗಳಿಂದ ಆಗಮಿಸಿದ್ದ 8 ಅಂತಾರಾಷ್ಟ್ರೀಯ ಹಾಗೂ ಪಂಜಾಬ್, ಗುಜರಾತ್, ಓಡಿಸ್ಸಾ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 40 ರಾಷ್ಟ್ರ ಮಟ್ಟದ ಗಾಳಿಪಟ ಪ್ರವೀಣರು ಪಟ ಹಾರಿಸುವುದರಲ್ಲಿ ತಮ್ಮದೇ ಆದ ಪ್ರಾವೀಣ್ಯ ಮತ್ತು ಕೈಚಳಕ ಮೆರೆದರು.
ಸ್ಲೊವೇನಿಯಾ ದೇಶದಿಂದ ಬಂದಿದ್ದ ಗಾಳಿಪಟು ಸ್ಪರ್ಧಿ ಸಾಶಾ ಈಟಿವಿ ಭಾರತ ಜೊತೆಗೆ ಮಾತನಾಡಿ, ಇದೇ ಮೊದಲ ಬಾರಿ ಕರ್ನಾಟಕ ರಾಜ್ಯಕ್ಕೆ ಬಂದಿದ್ದು, ಬೆಳಗಾವಿಯಲ್ಲಿ ತುಂಬಾ ಚೆನ್ನಾಗಿ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಇನ್ನು ಭಾರತ ದೇಶದಲ್ಲಿ ರಾಮ ಒಬ್ಬ ದೇವರು. ರಾಮನ ಭಾವಚಿತ್ರದ ಟೀಶರ್ಟ್ ನಾನು ಕೂಡ ಧರಿಸಿದ್ದೇನೆ. ಇದನ್ನು ಅಭಿಮಾನದಿಂದ ನಮ್ಮ ದೇಶಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಳಗಾವಿಯ ಕೀರ್ತಿ ಸುರಂಜನ್ ಮಾತನಾಡಿ, ನಾನು ದೇಹದ ಅಂಗಾಂಗಗಳ ದಾನದ ಕುರಿತು ಜಾಗೃತಿ ಮೂಡಿಸುವ ಗಾಳಿ ಪಟ ಹಾರಿಸಿದ್ದೇನೆ. ಅಭಯ್ ಪಾಟೀಲ ಅವರು ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಜನ ಕೂಡ ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ ಎಂದರು.
ಎರಡು ದಿನ ನಡೆಯಲಿದೆ ಉತ್ಸವ : ಗಾಳಿಪಟು ಸ್ಪರ್ಧಿ ವಿ ಕೆ ರಾವ್ ಮಾತನಾಡಿ, ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿದ್ದು, ರಾಮನ ಭಾವಚಿತ್ರದ ವಿಶೇಷ ಗಾಳಿಪಟಗಳನ್ನು ಹಾರಿಸಲಾಗುತ್ತಿದೆ. ಎಲ್ಲ ಆಟಗಾರರು ಜಾತಿ, ಧರ್ಮ ಬದಿಗಿಟ್ಟು ಎಲ್ಲರೂ ಶ್ರೀರಾಮನ ಟೀಶರ್ಟ್ ಧರಿಸಿ ಅತ್ಯಂತ ಉತ್ಸಾಹದಿಂದ ಗಾಳಿಪಟ ಹಾರಿಸುತ್ತಿದ್ದಾರೆ ಎಂದು ವಿವರಿಸಿದರು. ನಿನ್ನೆಯಿಂದ ಆರಂಭವಾಗಿರುವ ಈ ಗಾಳಿಪಟ ಉತ್ಸವು ಇನ್ನೂ ಎರಡು ದಿನ ನಡೆಯಲಿದೆ. ಬಾಡಿ ಬಿಲ್ಡಿಂಗ್, ವುಮೆನ್ ಫೆಸ್ಟಿವಲ್ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ:ಗಡಿ ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಹುಮನಾಬಾದ್ ಜನ