ಬೆಳಗಾವಿ : ಸಿನಿಮೀಯ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ನಡೆದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ಅಂಬಿ(48) ಅಪಹರಣಕ್ಕೆ ಒಳಗಾದ ಉದ್ಯಮಿ. ಫೆ.14 ರಂದು ರಾತ್ರಿ ಬಸವರಾಜ್ ಅವರನ್ನು ಅಪಹರಣ ಮಾಡಿದ್ದಾರೆ.
ಅಪಹರಣದ ಬಳಿಕ ಬಸವರಾಜ್ ಪತ್ನಿಗೆ ಮಂಗಳವಾರ (ಫೆ.18) ತಡರಾತ್ರಿ ಕರೆ ಮಾಡಿರುವ ಕಿಡ್ನಾಪರ್ಸ್, ಬಸವರಾಜ್ ಅಂಬಿಯನ್ನು ಬಿಡಿಸಿಕೊಂಡು ಹೋಗಬೇಕು ಎಂದಿದ್ದರೆ, 5 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಬಸವರಾಜ್ ಕಡೆಯವರು ಹಣ ತೆಗೆದುಕೊಂಡು ನಿಪ್ಪಾಣಿಗೆ ಹೋಗಿದ್ದಾರೆ. ಈ ವೇಳೆ ಮತ್ತೆ ಕರೆ ಮಾಡಿದ ಅಪಹರಣಕಾರರು, ಹಣ ತೆಗೆದುಕೊಂಡು ಒಬ್ಬರೇ ಬರುವುದು ಬಿಟ್ಟು ಎಲ್ಲ ಸಂಬಂಧಿಕರನ್ನು ಕರೆ ತಂದಿದ್ದೀರ. ಹೀಗಾಗಿ ನಿಮ್ಮ ಗಂಡನನ್ನು ಕೊಲೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ ಕರೆ ಮಾಡಿದ್ದಾರೆ. ಇದರಿಂದ ಆತಂಕಗೊಂಡು ಉದ್ಯಮಿ ಬಸವರಾಜ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಫೆ. 14ರಂದು ಸಾಂಗ್ಲಿಯಿಂದ ವಾಪಸ್ ಬರುವಾಗ ದುಷ್ಕರ್ಮಿಗಳು ಬಸವರಾಜ್ ಅವರನ್ನು ಕಿಡ್ನಾಪ್ ಮಾಡಿದ್ದು, 5 ಕೋಟಿ ಹಣಕ್ಕೆ ಭೇಟಿ ಇಟ್ಟಿದ್ದಾರೆ. ಬಸವರಾಜ್ ಉಳಿಸಿಕೊಳ್ಳಲು ಕುಟುಂಬಸ್ಥರು ಮನೆಯಲ್ಲಿದ್ದ 10 ಲಕ್ಷ ರೂ. ತೆಗೆದುಕೊಂಡು ನಿಪ್ಪಾಣಿ ಬೈಪಾಸ್ ಬಳಿ ಹೋಗಿದ್ದರು. ಬಸವರಾಜ್ ಮಗ ಹೂಲಿರಾಜ್ ಹಾಗೂ ಸ್ನೇಹಿತರನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಮತ್ತೆ ಫೋನ್ ಮಾಡಿ ನಾಲ್ಕು ಜನರ ಜೊತೆಗೆ ಯಾಕೆ ಬಂದೀರಿ ಎಂದು ಪ್ರಶ್ನಿಸಿದ್ದು, ಐದು ಕೋಟಿ ರೂಪಾಯಿ ಹಣ ಕೊಡಬೇಕು. ಇಲ್ಲದೆ ಇದ್ರೆ ಕೊಲೆ ಮಾಡುತ್ತೇವೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.