ದಾವಣಗೆರೆ:ಭೂಸ್ವಾಧೀನ ಮಾಡಿಕೊಂಡುಪರಿಹಾರ ನೀಡದ್ದಕ್ಕೆ ದಾವಣಗೆರೆಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಚೇರಿ (ಕೆಐಎಡಿಬಿ)ಯನ್ನು ರೈತರು ವಶಪಡಿಸಿಕೊಂಡಿದ್ದಾರೆ.
ಕೋರ್ಟ್ ಆದೇಶದ ಅನ್ವಯ ಕೆಐಎಡಿಬಿ ಕಚೇರಿಯ ಪೀಠೋಪಕರಣಗಳನ್ನು ಬಳ್ಳಾರಿ ರೈತರು ಜಪ್ತಿ ಮಾಡಿದ್ದಾರೆ. ಸುಮಾರು 63 ಕೋಟಿ ರೂಪಾಯಿ ಪರಿಹಾರ ಬಾಕಿ ಉಳಿದಿದೆ. ಈ ಸಂಬಂಧ ದಾಖಲಾದ ಪ್ರಕರಣವೊಂದರಲ್ಲಿ ಕಚೇರಿ ಜಪ್ತಿ ಮಾಡಲಾಗಿದೆ. ಬಳ್ಳಾರಿ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳು ದಾವಣಗೆರೆಯ ಕೆಐಎಡಿಬಿ ಕಚೇರಿ ವ್ಯಾಪ್ತಿಗೆ ಸೇರಿವೆ. ಜಪ್ತಿ ಆದೇಶದ ಬೆನ್ನಲ್ಲೇ ಕಚೇರಿಯಲ್ಲಿದ್ದ ಕುರ್ಚಿ, ಟೇಬಲ್, ಅಲ್ಮೆರಾ ಸೇರಿದಂತೆ ಕಚೇರಿಯ ಸಮಗ್ರ ವಸ್ತುಗಳನ್ನು ರೈತರು ಲಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ.
2010ರಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಭ್ರಹ್ಮಿಣಿ ಸ್ಟೀಲ್ಸ್, ಉತ್ತಮ್ ಗ್ಯಾಲೋ, ಎನ್ಎಮ್ಡಿಸಿ ಕಂಪನಿಗಳಿಗೆ ಕೆಐಎಡಿಬಿ ಭೂಮಿಯನ್ನು ಪರಭಾರೆ ಮಾಡಿತ್ತು. ಇದಕ್ಕೆ ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮ ಸೇರಿದಂತೆ ಹತ್ತು ಗ್ರಾಮಗಳ ರೈತರು ಜಮೀನು ನೀಡಿದ್ದರು. ಪ್ರತಿ ಒಂದು ಎಕರೆಗೆ ಐದು ಲಕ್ಷ ರೂಪಾಯಿಗೆ ನಿಗದಿಪಡಿಸಿ ಕೆಐಡಿಇಬಿಗೆ ರೈತರು ಮಾರಾಟ ಮಾಡಿದ್ದರು. ಸುಮಾರು 1500 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದ ಕೆಐಎಡಿಬಿ ಪ್ರತಿ ಎಕರೆಗೆ 5 ಲಕ್ಷ ರೂ. ಘೋಷಿಸಿತ್ತು.