ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದ ಮೇಲೆ ಜೈಲು ಅಧೀಕ್ಷಕ ಹುದ್ದೆಯಿಂದ ಮಲ್ಲಿಕಾರ್ಜುನ ಬಿ.ಸ್ವಾಮಿ ಅವರನ್ನು ಅಮಾನತುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ಇಂದು ಎತ್ತಿ ಹಿಡಿದಿದೆ.
ಸರ್ಕಾರದ ಆದೇಶ ರದ್ದುಕೋರಿ ಮಲ್ಲಿಕಾರ್ಜುನ ಬಿ.ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಅಧ್ಯಕ್ಷ ನ್ಯಾ.ಆರ್.ಬಿ.ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ 2024ರ ಜೂನ್‌ನಲ್ಲಿ ದರ್ಶನ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದರು. ಕಾರಾಗೃಹದ ಆವರಣದಲ್ಲಿ ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಟಿ ಕಪ್ ಹಿಡಿದುಕೊಂಡು, ಚೇರ್ ಮೇಲೆ ಆರಾಮಾಗಿ ಕುಳಿತು ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳಸೀನ ಹಾಗೂ ಸಹ ಆರೋಪಿಯಾದ ಆಪ್ತ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ 2024ರ ಆ.25ರಂದು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆ ಮಹಾನಿರ್ದೇಶಕರು ಘಟನೆ ಆಂತರಿಕ ತನಿಖೆಗೆ ಆದೇಶಿಸಿದ್ದರು.
ಕಾರಾಗೃಹ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕರ ನೇತೃತ್ವದ ತಂಡವು ಕಾರಾಗೃಹಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಪ್ರಾಥಮಿಕ ತನಿಖೆಯಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದು ಸಾಬೀತಾದ ಹಿನ್ನೆಲೆ ಅರ್ಜಿದಾರರಾಗಿರುವ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಬಿ.ಸ್ವಾಮಿ ಸೇರಿ 9 ಮಂದಿಯನ್ನು ಸೇವೆಯಿಂದ ಅಮಾತುಪಡಿಸಿ ಸರ್ಕಾರ ಆ.26ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಲ್ಲಿಕಾರ್ಜುನ ಸ್ವಾಮಿ ಕೆಎಟಿ ಮೆಟ್ಟಿಲೇರಿದ್ದರು.