ಬೆಂಗಳೂರು: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ರಾಜ್ಯದ 20,668 ಚದರ ಕಿಲೋ ಮೀಟರ್ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ರಾಜ್ಯದ 10 ಜಿಲ್ಲೆಗಳ ಅಂದರೆ ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲ್ಲೂಕು ಪುನರ್ ವಿಂಗಡಣೆಯ ನಂತರ 39) ತಾಲ್ಲೂಕುಗಳ 1533 ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಈ ವರದಿ ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಈಗ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಚಿವ ಸಂಪುಟದಲ್ಲಿ ಸಮಾಲೋಚಿಸಲಾಗುವುದು. ಬಳಿಕ ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತಂತೆ ಎಲ್ಲ ಬಾಧ್ಯಸ್ಥರೊಂದಿಗೆ ಅಂದರೆ 1533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ ಬಾಧಕ ಅರಿತು ವರದಿ ನೀಡಲು ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಮಾತುಕತೆ ನಡೆಸಲಿಲ್ಲ ಎಂದು ಹೇಳಿದರು.
2015ರ ನಂತರದ ಒತ್ತುವರಿ ಮಾತ್ರ ತೆರವು: ರಾಜ್ಯ ಸರ್ಕಾರ 2015ರಲ್ಲಿ ಒಂದು ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರ್ಕಾರ ಈಗಲೂ ಅದಕ್ಕೆ ಬದ್ಧವಾಗಿದೆ. ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ನಂತರದ ಹೊಸ ಒತ್ತುವರಿ ವಿಚಾರದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಅರಣ್ಯ ಸಮೃದ್ಧ ರಾಜ್ಯ ಕರ್ನಾಟಕ:ರಾಜ್ಯದಲ್ಲಿ ಒಟ್ಟು 43,382.76 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ಇದ್ದು, ಈ ಪೈಕಿ 11,318.358 ಚದರ ಕಿಲೋ ಮೀಟರ್ ಸಂರಕ್ಷಿತ ಅರಣ್ಯ ಪ್ರದೇಶವಿದೆ. ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನಗಳು, 36 ವನ್ಯಜೀವಿ ಅಭಯಾರಣ್ಯಗಳು, 19 ಸಂರಕ್ಷಿತ ಮೀಸಲು ಹಾಗೂ 1 ಸಮುದಾಯ ಮೀಸಲು ಅರಣ್ಯವಿದೆ. 5 ಹುಲಿ ಸಂರಕ್ಷಿತ ತಾಣಗಳಿವೆ ಎಂದು ಮಾಹಿತಿ ನೀಡಿದರು.