ಬೆಂಗಳೂರು:ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾದ ನೀತಿ ಆಯೋಗದ ಸಭೆ ಬಹಿಷ್ಕರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ 'ಎಕ್ಸ್' ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸೇರಿದಂತೆ ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ ಮಾಡಿಕೊಟ್ಟರೂ, ಮಂಗಳವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇಂದ್ರದ ಈ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾಗಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ' ಎಂದು ತಿಳಿಸಿದ್ದಾರೆ.
'2024-25ರ ಸಾಲಿನ ಬಜೆಟ್ ನೋಡಿದ ನಂತರ ನಮಗೆ ಕೇಂದ್ರ ಸರ್ಕಾರದ ಮೇಲಿನ ವಿಶ‍್ವಾಸವೇ ಹೊರಟುಹೋಗಿದೆ. ಬಜೆಟ್‌ನಲ್ಲಿ ರೈತರ ಕಲ್ಯಾಣದ ಕಾಳಜಿ ವ್ಯಕ್ತಪಡಿಸಿರುವ ಹಣಕಾಸುವ ಸಚಿವರು, ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾವವನ್ನೇ ಮಾಡಿಲ್ಲ. ಭದ್ರಾ ಮೇಲ್ದಂಡೆಗೆ ವಿಶೇಷ ನೆರವು ನೀಡುವ ತಮ್ಮದೇ ಭರವಸೆಯನ್ನೂ ಉಳಿಸಿಕೊಳ್ಳಲಿಲ್ಲ. ಕಳಸಾ-ಬಂಡೂರಿ ಯೋಜನೆಯನ್ನೂ ನಿರ್ಲಕ್ಷಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3ನೇ ಹಂತದ ಯೋಜನೆ ಮತ್ತು ಬೆಂಗಳೂರು ನಗರದ ಉದ್ದೇಶಿತ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಗತ್ಯ ಅನುಮತಿ ಮತ್ತು ಅನುದಾನವನ್ನೂ ನೀಡಿಲ್ಲ' ಎಂದು ದೂರಿದ್ದಾರೆ.