ಕರ್ನಾಟಕ

karnataka

ETV Bharat / state

ಅಮೆರಿಕದ ಹೈವೇಗಳಂತೆ ಕರ್ನಾಟಕದ ಹೆದ್ದಾರಿಗಳೂ ಆಗಲಿವೆ: ನಿತಿನ್​ ಗಡ್ಕರಿ ಭರವಸೆ

''ಅಮೆರಿಕದ ಹೈವೇಗಳಂತೆ ಕರ್ನಾಟಕದ ಹೆದ್ದಾರಿಗಳು ಆಗಲಿವೆ'' ಎಂದು ಕೇಂದ್ರ ಸಚಿವ ನಿತಿನ್​​ ಗಡ್ಕರಿ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ.

Union Minister Nitin Gadkari  ಕೇಂದ್ರ ಸಚಿವ ನಿತೀನ್ ಗಡ್ಕರಿ  ಶಿವಮೊಗ್ಗ  Shivamogga  ಸಂಸದ ಬಿ ವೈ ರಾಘವೇಂದ್ರ
ಅಮೆರಿಕದ ಹೈವೇಗಳಂತೆ ಕರ್ನಾಟಕದ ಹೆದ್ದಾರಿಗಳು ಆಗಲಿವೆ: ಕೇಂದ್ರ ಸಚಿವ ನಿತೀನ್ ಗಡ್ಕರಿ ಭರವಸೆ

By ETV Bharat Karnataka Team

Published : Feb 23, 2024, 12:09 PM IST

Updated : Feb 23, 2024, 12:31 PM IST

ಕೇಂದ್ರ ಸಚಿವ ನಿತಿನ್​​ ಗಡ್ಕರಿ ಭಾಷಣ

ಶಿವಮೊಗ್ಗ:''ಕರ್ನಾಟಕ ಪ್ರಗತಿಶೀಲ ಹಾಗೂ ಉತ್ತಮ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ. ಉತ್ತಮ ಆರ್ಥಿಕತೆ ಹೊಂದಿರುವ ರಾಜ್ಯವೂ ಹೌದು. ಕರ್ನಾಟಕದ ಪ್ರಗತಿಯು ದೇಶದ ವಿಕಾಸಕ್ಕೆ ಪೂರಕವಾಗಿದೆ'' ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 139 ಕೋಟಿ ರೂ ವೆಚ್ಚದ ತೀರ್ಥಹಳ್ಳಿ ತುಂಗಾ ನದಿ ಸೇತುವೆ, ರಾಣೆಬೆನ್ನೂರು - ಬೈಂದೂರು ರಾಷ್ಟ್ರೀಯ ಹೆದ್ದಾರಿಯ 7 ಕಿರು ಸೇತುವೆ, ಶಿವಮೊಗ್ಗ ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ಹಾಗೂ ಶಿವಮೊಗ್ಗದ ಬೈಪಾಸ್ ರಸ್ತೆಯ ತುಂಗಾ ನದಿ ಸೇತುವೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬಳಿಕ 2.438 ಕೋಟಿ ರೂ. ಶಿವಮೊಗ್ಗ- ಆನಂದಪುರಂ ಚತುಷ್ಪಥ ರಸ್ತೆ, ಹೂಸೂರು ಮತ್ತು ತಾಳಗುಪ್ಪ ರೈಲ್ವೆ ಮೇಲ್ಸೇತುವೆಗಳು, ಶಿವಮೊಗ್ಗ ಹರಕೆರೆ ಚತುಷ್ಪಥ ರಸ್ತೆ, ತೀರ್ಥಹಳ್ಳಿ- ನಲ್ಲಿಸರ ಚತುಷ್ಪಥ ರಸ್ತೆ, ಬೈಂದೂರು - ನಾಗೋಡಿ ದ್ವಿಪಥ ರಸ್ತೆ ಹಾಗೂ ಹೊಸನಗರ- ಆಡುಗೋಡಿ ದ್ವಿಪಥ ರಸ್ತೆಗಳ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಗಡ್ಕರಿ:''ಎಲ್ಲರಿಗೂ ನಮಸ್ಕಾರ'' ಎನ್ನುವ ಮೂಲಕ ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು, ''ನನಗೆ ಕರ್ನಾಟಕದ ನಾಡ ಗೀತೆ ಕೇಳಿದಾಗ ಖುಷಿ ಆಗುತ್ತದೆ. ನನಗೆ ಕನ್ನಡ ಭಾಷೆ ಬಾರದೇ ಹೋದರೂ, ಅದರ ಭಾವಾರ್ಥ ಅರ್ಥ ಮಾಡಿಕೊಳ್ಳುತ್ತೇನೆ'' ಎಂದರು.

ಅಮೆರಿಕದಂತೆ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ:''ಶಿವಮೊಗ್ಗದಲ್ಲಿ ರಸ್ತೆ ನಿರ್ಮಾಣದಿಂದ ಕೈಗಾರಿಕೆಗಳು ಬರುತ್ತವೆ. ಇದರಿಂದ ಯುವಕರಿಗೆ ಉದ್ಯೋಗ ಲಭ್ಯವಾಗುತ್ತದೆ. ಇದರಿಂದ ಕರ್ನಾಟಕದೊಂದಿಗೆ ಭಾರತವು ಸಹ ರಸ್ತೆಯ ಅಭಿವೃದ್ದಿಯಲ್ಲಿ ಮುನ್ನಡೆಯಲು ಪ್ರಾರಂಭಿಸುತ್ತದೆ. ನಮ್ಮ ಸರ್ಕಾರ ಬಂದಾಗ ಕರ್ನಾಟಕದಲ್ಲಿ ನಮ್ಮ ಇಲಾಖೆಯಿಂದ 3 ಲಕ್ಷ ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗಿದೆ. 80 ಸಾವಿರ ಕೋಟಿ ರೂ. ಕಾಮಗಾರಿ ಪೂರ್ಣವಾಗಿದೆ. 90 ಸಾವಿರ ಕೋಟಿ ರೂ. ಕಾಮಗಾರಿಗಳು ಪ್ರಗತಿಯಲ್ಲಿವೆ. 1,500 ಸಾವಿರ ಕೋಟಿ ರೂ. ಕಾಮಗಾರಿಗಳು ಮಂಜೂರು ಆಗುವ ಹಂತದಲ್ಲಿದ್ದು, ಇದರಿಂದ ಕರ್ನಾಟಕ ರಾಜ್ಯವು ತುಂಬಾ ಪ್ರಗತಿ ಸಾಧಿಸಲಿದೆ ಎಂದರು.

2024ರ ಮುಕ್ತಾಯದ ವೇಳೆಗೆ ಕರ್ನಾಟಕ‌ ರಾಷ್ಟ್ರೀಯ ಹೆದ್ದಾರಿಗಳು ಅಮೆರಿಕದ ರಾಷ್ಟ್ರೀಯ ಹೆದ್ದಾರಿಗಳಿಗೆ ಸಮಾನವಾಗಿರುತ್ತವೆ ಎಂದು ಇದೇ ವೇಳೆ ಅವರು ಭರವಸೆ ನೀಡಿದರು. ಕೊಡಚಾದ್ರಿ ಹಾಗೂ ಕೊಪ್ಪಳದ ಅಂಜನಾದ್ರಿಯಲ್ಲಿ ರೂಪ್ ವೇ ಮಂಜೂರು ಮಾಡಲಾಗಿದೆ. ಶಿವಮೊಗ್ಗ ನಗರದ ನಾಗೇಂದ್ರ ಕಾಲೋನಿ ಹತ್ತಿರ ಹಾಗೂ ಹೊಸನಗರ ತಾಲೂಕು ಅರಸಾಳು ಬಳಿ ಆರ್​ಓಬಿ ನಿರ್ಮಾಣಕ್ಕೆ ಮಂಜೂರು ಮಾಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ಸ್ಮಾರ್ಟ್ ವಿಲೇಜ್ ಸಹ ನಿರ್ಮಾಣಕ್ಕೆ ಒತ್ತು:''ಪ್ರಧಾನ‌ ಮಂತ್ರಿ ಅವರ ಕನಸಿನಂತೆ ನಮ್ಮ ಭಾರತ ಪ್ರಪಂಚದ ಮೂರನೇ ಅರ್ಥಿಕ ದೇಶವಾಗಬೇಕಿದೆ. ಆತ್ಮ‌ನಿರ್ಭರ ಭಾರತದ ಮೂಲಕ ಗ್ರಾಮೀಣ ಜನರ, ಕೂಲಿಕಾರರ, ರೈತರ ವಿಕಾಸವಾಗಬೇಕಿದೆ'' ಎಂದ ಅವರು, ದೇಶದಲ್ಲಿ ಸ್ಮಾರ್ಟ್ ಸಿಟಿ‌ ಮಾಡಿದ ಹಾಗೆ ಸ್ಮಾರ್ಟ್ ವಿಲೇಜ್ ಸಹ ನಿರ್ಮಾಣಕ್ಕೆ ಒತ್ತು ನೀಡಲಾಗುವುದು'' ಎಂದು ತಿಳಿಸಿದರು.

''ಕರ್ನಾಟಕದಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಇದರಿಂದ ಎಥನಾಲ್ ಉತ್ಪತ್ತಿಯಾಗುತ್ತದೆ. ಪೆಟ್ರೋಲಿಯಂಗೆ ಪರ್ಯಾಯವಾದ ಇಂಧನದ ಕುರಿತು ಶೋಧದಲ್ಲಿದ್ದು, ಈ ನಿಟ್ಟಿನಲ್ಲಿ 2004ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಥನಾಲ್, ಮಿಥನಾಲ್, ಬಯೋ ಡೀಸಲ್, ಎಲೆಕ್ಟ್ರಿಕ್ ಹಾಗೂ ಗ್ರೀನ್ ಹೈಡ್ರೋನಲ್ ಇವು ನಮ್ಮ ಭವಿಷ್ಯವಾಗಿದೆ. ನಾವು ಪ್ರತಿ ವರ್ಷ 16 ಲಕ್ಷ ಕೋಟಿ ರೂ. ಇಂಧನವನ್ನು ಆಮದು ಮಾಡಿಕೊಳ್ಳುತ್ತೇವೆ. ಪೆಟ್ರೋಲಿಯಂ
ತೈಲಗಳಿಗೆ ಬದಲಾದ ಇತರ ತೈಲಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತು

ಗ್ರಾಪಂ ರಸ್ತೆ ಹೈವೇ ಆಗಿ ಮೇಲ್ದರ್ಜೆಗೆ - ಬಿ.ವೈ. ರಾಘವೇಂದ್ರ:ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ''ರಾಷ್ಟ್ರೀಯ ಹೆದ್ದಾರಿಗಳು ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. 91,287 ಕಿಮೀ ಕಾರ್ಯ ಆಗಿತ್ತು. 2014 ರಿಂದ 57,558 ಕಿಮೀ ರಸ್ತೆ ನಿರ್ಮಾಣವಾಗಿದೆ. ಹಿಂದೆ ಪ್ರತಿನಿತ್ಯ 12 ಕಿಮೀ ರಸ್ತೆ ನಿರ್ಮಾಣ ಆಗುತ್ತಿತ್ತು. ಇದೀಗ 37 ಕಿ.ಮೀ ಪ್ರತಿನಿತ್ಯ ರಸ್ತೆ ನಿರ್ಮಾಣವಾಗುತ್ತಿದೆ'' ಎಂದು ತಿಳಿಸಿದರು.

''ಶಿವಮೊಗ್ಗದಲ್ಲಿ ರಾಣೆಬೆನ್ನೂರು - ಬೈಂದೂರು ರಸ್ತೆಯನ್ನು ಎನ್ಎಚ್ ಹೈವೇ ಮಾಡಲಾಗುತ್ತಿದ್ದು ಅದಕ್ಕೆ 600 ಕೋಟಿ ರೂ. ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ವಿದ್ಯಾನಗರ ಮೇಲ್ಸೇತುವೆ, ಬೈಪಾಸ್ ಸೇತುವೆ, ತೀರ್ಥಹಳ್ಳಿಯಲ್ಲಿ ತುಂಗಾ ನದಿ ಸೇತುವೆಯ 139 ಕೋಟಿ ರೂ. ಕಾಮಗಾರಿ ಉದ್ಘಾಟಿಸಲಾಗಿದೆ. ಕೊಲ್ಲೂರಿನ ಕೇಬಲ್ ಕಾರ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ನಗರದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆದ್ಯತೆಗೆ ಮನವಿ ಮಾಡಲಾಗಿದೆ. 2,550 ಕಿಮೀ ಕಾಮಗಾರಿಗೆ ಚಾಲನೆ ದೊರೆತಿದೆ. ಶರಾವತಿ ನದಿ ಹಿನ್ನೀರಿನ ಸೇತುವೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ'' ಎಂದರು.

ಸಚಿವ ಸತೀಶ್ ಜಾರಕಿಹೊಳಿ, ಸಂಸದ ದೇವೆಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಗುರುರಾಜ ಗಂಟಿಹೊಳಿ ಸೇರಿದಂತೆ ಅಧಿಕಾರಿಗಳು ಇದ್ದರು.

ಇದನ್ನೂ ಓದಿ:6 ವನ್ಯಜೀವಿ ಧಾಮಗಳನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವ ಹೊಸ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲು ಸಂಪುಟ ಒಪ್ಪಿಗೆ

Last Updated : Feb 23, 2024, 12:31 PM IST

ABOUT THE AUTHOR

...view details