ಕರ್ನಾಟಕ

karnataka

ETV Bharat / state

ನಾಳೆಯಿಂದ 23ರ ವರೆಗೆ ಕರಾವಳಿಯಲ್ಲಿ ಕರ್ನಾಟಕ ಕ್ರೀಡಾಕೂಟ: ಸಿಎಂ ಚಾಲನೆ - KARNATAKA STATE SPORTS MEET 2025

ಕರ್ನಾಟಕ ಕ್ರೀಡಾಕೂಟಕ್ಕೆ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ 5 ಕೋಟಿ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ತಿಳಿಸಿದ್ದಾರೆ.

karnataka-state-sports-meet-2025-from-17-to-23-cm-siddaramaiah-inauguration
ನಾಳೆಯಿಂದ 23 ವರೆಗೆ ಕರಾವಳಿಯಲ್ಲಿ ಕರ್ನಾಟಕ ಕ್ರೀಡಾಕೂಟ: ಸಿಎಂ ಚಾಲನೆ (ETV Bharat)

By ETV Bharat Karnataka Team

Published : Jan 16, 2025, 7:39 PM IST

ಮಂಗಳೂರು:"ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ 'ಕರ್ನಾಟಕ ಕ್ರೀಡಾಕೂಟ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ" ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, "ಈ ಕ್ರೀಡಾಕೂಟಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ.ಗಳನ್ನು ಸರಕಾರ ಒದಗಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜ. 17ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದು, ಸಮಾರೋಪ ಸಮಾರಂಭ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿದೆ" ಎಂದು ತಿಳಿಸಿದರು.

"ಒಟ್ಟು 25 ವಿವಿಧ ಕ್ರೀಡೆಗಳಲ್ಲಿ ಆಯ್ದ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ 3750 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರ ತಂಡ ಸೇರಿದಂತೆ ಒಟ್ಟು 4,500 ಮಂದಿ ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ 12 ಕ್ರೀಡೆಗಳು, ಉಡುಪಿ ಮತ್ತು ಮಣಿಪಾಲದಲ್ಲಿ 11 ಕ್ರೀಡೆಗಳು ಹಾಗೂ ಶೂಟಿಂಗ್ ಹಾಗೂ ಜಿಮ್ನಾಸ್ಟಿಕ್ಸ್ ಬೆಂಗಳೂರಿನಲ್ಲಿ ನಡೆಯಲಿದೆ."

"ಪ್ರತಿಯೊಂದು ಕ್ರೀಡೆಯಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ 621 ಚಿನ್ನ ಹಾಗೂ ಬೆಳ್ಳಿ ಹಾಗೂ 817 ಕಂಚಿನ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. ಕ್ರೀಡಾ ಕೂಟದ ಉದ್ಘಾಟನೆಯ ನಿಮಿತ್ತ ಜ.17ರಂದು ಸಂಜೆ 4 ಗಂಟೆಗೆ ಸಂತ ಅಲೋಶಿಯ್ ಕಾಲೇಜು ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ಕರಾವಳಿಯ ಕಲೆ, ಕ್ರೀಡೆ ಹಾಗೂ ಸಂಸ್ಕೃತಿ ಬಿಂಬಿಸುವ 20 ಕಲಾ ತಂಡಗಳ ಮೆರವಣಿಗೆ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದ ಬಳಿಕ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ತಿಳಿಸಿದರು.

"ಮಂಗಳೂರಿನಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಫೆನ್ಸಿಂಗ್ (ಕತ್ತಿವರಸೆ), ಫುಟ್ಬಾಲ್, ಹ್ಯಾಂಡ್‌ಬಾಲ್, ಖೋಖೋ, ನೆಟ್‌ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್, ವುಶು ಕ್ರೀಡೆಗಳು ನಡೆಯಲಿದ್ದು, ಉಡುಪಿಯಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೋಯಿಂಗ್ ನಡೆಯಲಿದೆ. ಮಣಿಪಾಲದಲ್ಲಿ ಲಾನ್ ಟೆನ್ನಿಸ್ ಹಾಗೂ ಟೇಬಲ್ ಟೆನ್ನಿಸ್ ಆಯೋಜಿಸಲಾಗಿದ್ದು, ಜಿಮ್ನಾಸ್ಟಿಕ್ ಹಾಗೂ ಶೂಟಿಂಗ್ ಕ್ರೀಡೆಗಳು ಬೆಂಗಳೂರಿನಲ್ಲಿ ನಡೆಯಲಿವೆ." ಎಂದು ಮಾಹಿತಿ ನೀಡಿದರು.

"ಕಳೆದ ವರ್ಷ ದಸರಾ ಕ್ರೀಡಾಕೂಟದ ಜತೆಗೆ ರಾಜ್ಯದ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದೀಗ ಈ ವರ್ಷದಿಂದ ಪ್ರತ್ಯೇಕವಾಗಿ ಕರ್ನಾಟಕ ಕ್ರೀಡಾಕೂಟ ಹೆಸರಿನಲ್ಲಿ ಆಯ್ದ ಉನ್ನತ ಮಟ್ಟದ ಕ್ರೀಡಾಪಟುಗಳೊಂದಿಗೆ ಒಲಿಂಪಿಕ್ ಮಾದರಿಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು, ಭಾಗವಹಿಸುವ ಕ್ರೀಡಾಪಟುಗಳ ಸಮಗ್ರ ಮಾಹಿತಿಯೊಂದಿಗೆ, ಫಲಿತಾಂಶ ಕೂಡಾ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಲಾಗಿದೆ. ಎಲ್ಲಾ ಆಟಗಾರರಿಗೆ ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ವಿತರಿಸುವ ವ್ಯವಸ್ಥೆಯಾಗಿದೆ" ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ:ಜ. 17 ರಿಂದ 23ರವರೆಗೆ ಕರ್ನಾಟಕ ಕ್ರೀಡಾಕೂಟ-2025: ಲಾಂಛನ ಬಿಡುಗಡೆ‌ ಮಾಡಿದ ಸಿಎಂ

ABOUT THE AUTHOR

...view details