ಬೆಂಗಳೂರು: ರಾಜ್ಯದ ವಿಪತ್ತು ನಿರ್ವಹಣಾ ತಂಡ ಉತ್ತರಪ್ರದೇಶ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಆದರೆ, ಉತ್ತರಪ್ರದೇಶ ಸರ್ಕಾರ ಪ್ರಯಾಗ್ರಾಜ್ ಕುಂಭಮೇಳ ದುರುಂತದಲ್ಲಿ ರಾಜ್ಯದ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಜನ ಗಾಯಾಳುಗಳಾಗಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದ ಕಚೇರಿಯಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪ್ರಯಾಗ್ರಾಜ್ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ರಾಜ್ಯದ ನಾಲ್ಕು ಜನ ಮೃತಪಟ್ಟಿರುವ ಬಗ್ಗೆ ಶಂಕೆ ಇದೆ. ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವಾಟ (24), ಜ್ಯೋತಿ ದೀಪಕ್ ಹತ್ತರವಾಟ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣ್ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿರುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲಾಧಿಕಾರಿ ಸ್ವತಃ ಕುಂಭಮೇಳಕ್ಕೆ ತೆರಳಿದವರ ಕುಟುಂಬದವರನ್ನು ಸಂಪರ್ಕಿಸಿ ನಾಲ್ಕು ಜನ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು" ಎಂದರು.
ಸಚಿವ ಕೃಷ್ಣ ಬೈರೇಗೌಡ (ETV Bharat) ಬಿಜೆಪಿ ನಾಯಕರ ಸಹಾಯದಿಂದ ಬೆಳಗಾವಿ ಜಿಲ್ಲೆಯ 300ಕ್ಕಿಂತ ಹೆಚ್ಚು ಜನ ಕುಂಭಮೇಳಕ್ಕೆ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಈ ನಡುವೆ ಉತ್ತರ ಪ್ರದೇಶ ಸರ್ಕಾರ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಕನ್ನಡಿಗರ ಹಿತರಕ್ಷಣೆಗಾಗಿ ಓರ್ವ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಹಾಗೂ ಪೊಲೀಸ್ ಅಧಿಕಾರಿಯೊಬ್ಬರನ್ನೊಳಗೊಂಡ ಮೂರು ಜನರ ತಂಡವನ್ನು ಈಗಾಗಲೇ ಪ್ರಯಾಗ್ರಾಜ್ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಸಹಾಯವಾಣಿಯನ್ನೂ 80-22340676 ತೆರೆದಿದ್ದು, ಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಮಾಹಿತಿ ನೀಡಲು ಕೋರಿದರು.
ಬೆಳಗಾವಿಯ ಇನ್ನೂ 8-10 ಜನ ಮಿಸ್ ಆಗಿದ್ದಾರೆ- ಜಗದೀಶ್ ಶೆಟ್ಟರ್:"ಬೆಳಗಾವಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಗ್ರಾಜ್ಗೆ ಹೋಗಿದ್ದಾರೆ. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದು ಖೇದಕರ, ಆಘಾತಕಾರಿ ಮತ್ತು ವಿಷಾದನೀಯ ಘಟನೆ. ಇದು ಆಗಬಾರದಿತ್ತು. ಅದೇ ರೀತಿ ನನಗಿರುವ ಮಾಹಿತಿ ಪ್ರಕಾರ ಇನ್ನೂ 8-10 ಜನರು ಮಿಸ್ಸಿಂಗ್ ಆಗಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕಿದೆ" ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ (ETV Bharat) ಮೃತ ಜ್ಯೋತಿ ಹತ್ತರವಾಟ ಮತ್ತು ಮಗಳು ಮೇಘಾ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. "ಬೆಳಗ್ಗೆ ವಿಷಯ ಗೊತ್ತಾದ ತಕ್ಷಣ ಅವರ ಕುಟುಂಬಸ್ಥರು ಮತ್ತು ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದೆ. ಮಧ್ಯಾಹ್ನ ಹೊತ್ತಿಗೆ ಸಾವಿನ ಕುರಿತು ಸ್ಪಷ್ಟವಾಯಿತು. ಹತ್ತರವಾಟ ಕುಟುಂಬದ ಇಬ್ಬರು ಹಾಗೂ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಇಬ್ಬರು ಸೇರಿ ನಾಲ್ವರು ಮೃತರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮಿಸ್ಸಿಂಗ್ ಆಗಿರುವವರ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ" ಎಂದರು.
"ಮೃತರ ಕುಟುಂಬಗಳಿಗೆ ದೊಡ್ಡ ಆಘಾತವಾಗಿದೆ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಯಾಗ್ರಾಜ್ಗೆ ಹೋದ ಕೆಲವರು ನನಗೆ ಕರೆ ಮಾಡಿದ್ದರು. ಎಲ್ಲಾ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಆದರೆ, ಎಲ್ಲೋ ಒಂದು ಕಡೆ ಗಡಿಬಿಡಿಯಿಂದ ನೂಕುನುಗ್ಗಾಟ ನಡೆದಿದೆ ಎಂದಿದ್ದಾರೆ. ಇನ್ನು ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿದಿನಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿಗೆ ಜನರು ಬಂದಿದ್ದರಿಂದ ಈ ಅನಾಹುತ ಉಂಟಾಗಿದೆ" ಎಂದರು.
"ಬೆಳಗಾವಿ ಜಿಲ್ಲಾಡಳಿತ ಪ್ರಯಾಗ್ರಾಜ್ ಜಿಲ್ಲಾಡಳಿತದ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ಈಗಾಗಲೇ ಹರ್ಷ ಎಂಬ ವಿಶೇಷ ಅಧಿಕಾರಿಯನ್ನು ನೇಮಿಸಿ ಪ್ರಯಾಗ್ರಾಜ್ಗೆ ಕಳುಹಿಸಿದ್ದಾರೆ. ಮೃತದೇಹಗಳನ್ನು ಆದಷ್ಟು ಬೇಗನೆ ವಾಪಸ್ ತರಿಸುವ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ. ಮೃತದೇಹಗಳನ್ನು ಸರಿಯಾಗಿ ತರಿಸುವ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ತುರ್ತಾಗಿ ಒಳ್ಳೆ ರೀತಿಯ ವ್ಯವಸ್ಥೆ ಮಾಡುವಂತೆ ಅವರಿಗೆ ಸೂಚಿಸುತ್ತೇನೆ. ಇನ್ನು ಮೃತರ ಕುಟುಂಬಸ್ಥರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವೆ" ಎಂದು ತಿಳಿಸಿದರು.
ಕುಂಭಮೇಳದ ಪುಣ್ಯಸ್ನಾನ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹೆಚ್ಡಿಕೆ ಆಕ್ರೋಶ:"ಈ ಘಟನೆ ಎಲ್ಲರಿಗೂ ನೋವು ತಂದಿದೆ. ಇವತ್ತು ನಮ್ಮ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ದಿನ ಎನ್ನುವ ಭಾವನೆ ಎಲ್ಲರಿಗೂ ಇದೆ. ಅದಕ್ಕಾಗಿ ಅಲ್ಲಿ ಪುಣ್ಯಸ್ನಾನ ಮಾಡಿದರೆ ಒಳ್ಳೆಯದು ಎನ್ನುವ ಭಾವನೆ ಜನರಲ್ಲಿದೆ. ಅದಕ್ಕಾಗಿ ದಾಖಲೆ ಪ್ರಮಾಣದಲ್ಲಿ ಜನ ಹೋಗಿದ್ದಾರೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಸರಕಾರ ತೆಗೆದುಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರ ಜತೆ ಮಾತನಾಡಿದ್ದಾರೆ. ದೊಡ್ಡ ಮಟ್ಟದ ಮುಂಜಾಗ್ರತಾ ಕ್ರಮ ವಹಿಸಿ ಎಂದು ಯೋಗಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮೈಸೂರಿಗೆ ಆಗಮಿಸಿದ ಕುಮಾರಸ್ವಾಮಿ, ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಕುಂಭಮೇಳದಲ್ಲಿ ಅದ್ಭುತವಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದು ಸಮಸ್ಥೆಗೆ ಕಾರಣವಾಗಿದೆ. ಮೌನಿ ಅಮಾವಾಸ್ಯೆ ದಿನ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಹೀಗಾಗಿ ಪರಿಸ್ಥಿತಿಯನ್ನು ನೋಡಿಕೊಂಡು ಬನ್ನಿ ಎಂದು ಕುಂಭಮೇಳ ಸಮಿತಿ ಜನತೆಗೆ ಮನವಿ ಮಾಡಿತ್ತು. ಆದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿರುವಾಗ ಈ ಘಟನೆ ನಡೆದಿದೆ" ಎಂದು ನೋವು ವ್ಯಕ್ತಪಡಿಸಿದರು.
ಸಮಸ್ಯೆ ಇದ್ದರೆ ನಮ್ಮ ಕಚೇರಿ ಸಂಪರ್ಕಿಸಿ:ಯಾರಿಗೆ ಸಮಸ್ಯೆ ಆಗಿದ್ದರೂ ನನ್ನ ಸಂಪರ್ಕ ಮಾಡಲು ಹೇಳಿದ್ದೇನೆ. ಮಾಧ್ಯಮದ ಮೂಲಕ ಮತ್ತೆ ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳಿಗೂ ಕೂಡ ಹೇಳಿದ್ದೇನೆ.ಕುಂಭಮೇಳದಲ್ಲಿ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದು, ಯಾರಿಗೇ ಆದರೂ ಸಮಸ್ಯೆ ಆಗಿದ್ದರೆ ದೆಹಲಿಯಲ್ಲಿರುವ ನನ್ನ ಸಚಿವಾಲಯವನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ (ETV Bharat) ಕಾಂಗ್ರೆಸ್ ಸಂಸ್ಕೃತಿಯೇ ಅಂಥದ್ದು:ಕುಂಭಮೇಳದ ಪುಣ್ಯಸ್ನಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ನವರ ಸಂಸ್ಕೃತಿಯೇ ಅಂಥದ್ದು. ಕಾಂಗ್ರೆಸ್ನವರಿಗೆ ಟೀಕೆ ಮಾಡುವುದೇ ಕೆಲಸ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಮಾಡಿರುವ ಟೀಕೆ, ಪದ ಬಳಕೆ ಸರಿಯಿಲ್ಲ. ಕಾಂಗ್ರೆಸ್ಗೆ ನಮ್ಮ ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಈ ರೀತಿ ಮಾತನಾಡುತ್ತಾರೆ" ಎಂದು ಖಂಡಿಸಿದರು.
"ಕಾಂಗ್ರೆಸ್ನವರು ಬೆಳಗಾವಿಯಲ್ಲಿ ಜೈ ಬಾಪು, ಜೈ ಅಂಬೇಡ್ಕರ್, ಜೈ ಸಂವಿಧಾನ ಎಂದು ಗಾಂಧೀಜಿಯವರ ಹೆಸರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದರು. ಆದರೂ ಈಗ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಗಾಂಧೀಜಿ ಅವರ ಮೇಲೆ ಕಾಂಗ್ರೆಸಿಗರಿಗೆ ನಂಬಿಕೆ ಇದ್ದಿದ್ದರೆ ಇಂತಹ ಮಾತುಗಳು ಬರುತ್ತಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ತಾಯಿ - ಮಗಳು ಸೇರಿ ಬೆಳಗಾವಿಯ ನಾಲ್ವರು ಸಾವು