ಕರ್ನಾಟಕ

karnataka

ETV Bharat / state

ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ: ಕೆಳಮನೆಯಲ್ಲಿ ಪಾಸ್​, ಮೇಲ್ಮನೆಯಲ್ಲಿ ಫೇಲ್; ಮತ ಎಣಿಕೆ ಮೂಲಕ ಪರಿಶೀಲನಾ ಸಮಿತಿ ರಚನೆಗೆ ನಿರ್ಧಾರ

ಕೆಳಮನೆಯಲ್ಲಿ ಪಾಸ್​ ಆಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ ಮೇಲ್ಮನೆಯಲ್ಲಿ ಫೇಲ್ ಆಗಿದ್ದರಿಂದ ಮತ ಎಣಿಕೆ ಮೂಲಕ ಪರಿಶೀಲನಾ ಸಮಿತಿ ರಚನೆಗೆ ನಿರ್ಧಾರ ನಿರ್ಧರಿಸಲಾಗಿದೆ.

ವಿಧಾನಪರಿಷತ್
ವಿಧಾನಪರಿಷತ್

By ETV Bharat Karnataka Team

Published : Feb 21, 2024, 9:42 PM IST

Updated : Feb 21, 2024, 9:55 PM IST

ಬೆಂಗಳೂರು : ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ ಜಾರಿ ಬಗ್ಗೆ ಪರ-ವಿರೋಧ ಕುರಿತು ಸತತ ಮೂರೂವರೆ ಗಂಟೆಗಳ ಚರ್ಚೆ ನಡೆಸಿದರೂ ಸಾಕಾರವಾಗದೆ ಅಂತಿಮವಾಗಿ ಮತ ಎಣಿಕೆ ಮೂಲಕ ಪರಿಶೀಲನಾ ಸಮಿತಿ ರಚನೆಗೆ ಒಪ್ಪಿಸಲಾಯಿತು.

ತಿದ್ದುಪಡಿ ವಿಧೇಯಕ ಜಾರಿ ಬಗ್ಗೆ ವಿಪಕ್ಷಗಳು ಒಪ್ಪದೆ ಪರಿಶೀಲನಾ ಸಮಿತಿ ರಚನೆಗೆ ಬಿಗಿಪಟ್ಟು ಹಿಡಿದ ಹಿನ್ನೆಲೆ ಅಂತಿಮವಾಗಿ ಮತ ಎಣಿಕೆ ಪ್ರಸ್ತಾವನೆಗೆ ಉಪಸಭಾಪತಿ ಎಂ ಕೆ ಪ್ರಾಣೇಶ್ ಅವರು ಸೂಚಿಸಿದರು. ಸಮಿತಿ ರಚನೆ ಪರ 33 ಮಂದಿ ಬಿಜೆಪಿ-ಜೆಡಿಎಸ್ ಹಾಗೂ ಸಮಿತಿಗೆ ವಿರೋಧವಾಗಿ 21 ಕಾಂಗ್ರೆಸ್ ಸದಸ್ಯರು ಇದ್ದಿದ್ದರಿಂದ ಅಂತಿಮವಾಗಿ ವಿಧೇಯಕವನ್ನ ಪರಿಶೀಲನಾ ಸಮಿತಿ ರಚನೆಗೆ ನಿರ್ಧರಿಸಲಾಯಿತು. ಈ ವೇಳೆ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ತಟ್ಟಸ್ಥರಾಗಿ ಉಳಿದುಕೊಂಡರು. ಇದಕ್ಕೂ ಮುನ್ನ ವಿಧೇಯಕಕ್ಕೆ ತಿದ್ದುಪಡಿ ಜಾರಿ ಬಗ್ಗೆ ಸುದೀರ್ಘ ಮೂರುವರೆ ಗಂಟೆಗಳ ಬಗ್ಗೆ ಚರ್ಚೆ ನಡೆಸಿದರೂ, ಉಭಯ ಪಕ್ಷಗಳ ಸದಸ್ಯರು ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.

ಈ ಮಧ್ಯೆ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಮಾತನಾಡಿ, ಮೀಸಲಾತಿ ಬಗ್ಗೆ ಚರ್ಚೆ ಮಾಡುವುದೇ ಒಂದು ಅವೈಜ್ಞಾನಿಕ. ಹಾಗೂ ಸಂವಿಧಾನ ವಿರೋಧಿ ಸಹ ಹೌದು. ಪ್ರತಿಯೊಂದು ಕಡೆ ಮೀಸಲಾತಿ ಬಗ್ಗೆ ಚರ್ಚೆ ಆಗುತ್ತಿದೆ. ಸಹಕಾರಿಯಲ್ಲಿ ಮೀಸಲಾತಿಯೇ ಬೇಡ ಅಂದರೆ ಹೇಗೆ? ಸಹಕಾರಕ್ಕೆ ಸರ್ಕಾರದ ಕಾನೂನು ಲೇಪನ ಕೊಟ್ಟಿದ್ದೇವೆ. ಮೀಸಲಾತಿ ಸಹಕಾರಿ ಬ್ಯಾಂಕ್ ವಿಧೇಯಕದಲ್ಲಿ ಇರಲೇಬೇಕು. ಸಹಕಾರಿ ವಲಯದಲ್ಲಿ ಕಾನೂನು ಸ್ವಲ್ಪ ಜಾಳು-ಜಾಳಾಗಿದ್ದು ಸರಿಪಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ಸಚೇತಕ ಎನ್. ರವಿಕುಮಾರ್ ಮಾತನಾಡಿ, ಕರ್ನಾಟಕ ಸೌಹಾರ್ದ ಸಹಕಾರಿ ವಿಧೇಯಕಕ್ಕೆ ತಿದ್ದುಪಡಿ ತಂದರೆ ಸಹಕಾರದಿಂದ ಕ್ರಮೇಣ ಸರ್ಕಾರಿಕರಣವಾಗುತ್ತಿದೆ. ಕಾಯ್ದೆಯಲ್ಲಿ ನಾಮನಿರ್ದೇಶನ ಮಾಡುವ ಅಂಶ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಅದೇ ರೀತಿ ಸದಸ್ಯರಾದ ತೇಜಸ್ವಿನಿ ಗೌಡ, ತಿಪ್ಪೇಸ್ವಾಮಿ, ಅರುಣ್, ಶರವಣ ಹಾಗೂ ಕಾಂಗ್ರೆಸ್​ನಿಂದ ರವಿ, ಅಬ್ದುಲ್ ನಜೀರ್, ಅನಿಲ್ ಕುಮಾರ್, ಹರಿಪ್ರಸಾದ್ ಸೇರಿದಂತೆ ಹಲವು ಸದಸ್ಯರು ವಿಧೇಯಕ ತಿದ್ದುಪಡಿಗೆ ಪರ-ವಿರೋಧ ಚರ್ಚೆ ನಡೆಸಿದರು.

ಈ ವೇಳೆ ಸಹಕಾರ ಸಚಿವ ಕೆ. ಎನ್ ರಾಜಣ್ಣ ಮಾತನಾಡಿ, ತಿದ್ದುಪಡಿ ವಿಧೇಯಕಕ್ಕೆ ಹೊಸ ಅಂಶ ಸೇರಿಸಿಲ್ಲ. ಸೌಹಾರ್ದ ಬ್ಯಾಂಕ್​ಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸುವ ಚುನಾವಣಾ ಪ್ರಾಧಿಕಾರ ತೆಗೆಯಬೇಕು. ಏಕೆಂದರೆ ಇದೊಂದು ಬಿಳಿಯಾನೆ ಎಂಬ ರೀತಿಯಲ್ಲಿದೆ. ಚುನಾವಣೆಗೆ ಬೇಕಾದ ಎಲ್ಲ ಸಿದ್ಧತೆ ಹಾಗೂ ಪ್ರಕ್ರಿಯೆಗಳನ್ನ ನಮ್ಮ ಅಧಿಕಾರಿಗಳೇ ಮಾಡುತ್ತಾರೆ. ಆದರೆ ಪ್ರಾಧಿಕಾರ ಜವಾಬ್ದಾರಿ ಮಾತ್ರ ಅನುಮತಿ ನೀಡುವುದಷ್ಟೇ. ಇದರಿಂದ ಸಮಯ ವ್ಯರ್ಥ ಹಾಗೂ ಹಣ ಹೆಚ್ಚಾಗಲಿದೆ. ಹೀಗಾಗಿ ನಿಬಂಧಕರ ಮಟ್ಟ ಅಧಿಕಾರಿಗಳೇ ಚುನಾವಣೆ ನಡೆಸುವ ಅಧಿಕಾರ ಹೊಂದಿರಬೇಕೆಂದು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು.

ಸೌಹಾರ್ದ ವಲಯದ ಪ್ರಾಥಮಿಕ ಹಂತದಲ್ಲಿ ಮೀಸಲಾತಿಯಿದ್ದು, ತಾಲೂಕು ಹಾಗೂ ಜಿಲ್ಲಾಮಟ್ಟದ ಹಾಗೂ ಬ್ಯಾಂಕ್ ಅಧಿಕಾರಿಗಳಿಗೂ ಮೀಸಲಾತಿ ಕಲ್ಪಿಸಬೇಕೆಂಬ ಆಶಯ ವಿಧೇಯಕದಲ್ಲಿದೆ. ಅಧಿಕಾರ ದುರುಪಯೋಗ ಅಕ್ರಮವೆಸಗಿರುವುದು ಹೊಸದೇನಲ್ಲ. ಬೆಂಗಳೂರಿನ ಸೌಹಾರ್ದ ಬ್ಯಾಂಕ್​ಗಳಲ್ಲಿ ಸುಮಾರು 1700 ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿದೆ. ಹೀಗಾಗಿ ಕಾಯ್ದೆಯಲ್ಲಿನ ನ್ಯೂನತೆಗಳನ್ನ ಸರಿಪಡಿಸಿಕೊಂಡು ತಿದ್ದುಪಡಿ ತಂದು, ಸದನದ ಮುಂದೆ ಇಡಲಾಗಿದ್ದು, ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಜೈ ಶ್ರೀರಾಮ್ ಘೋಷಣೆ :ಇದಕ್ಕೆ ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಸೌಹಾರ್ದ ಕಾಯ್ದೆಗೆ ತಿದ್ದುಪಡಿ ವಿಧೇಯಕಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕೆಲ ಅಂಶಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಬೇಕಿದೆ. ಹೀಗಾಗಿ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದರು. ಉಭಯ ಪಕ್ಷಗಳು ನಡುವೆ ಮೂಡದ ಒಮ್ಮತದ ಹಿನ್ನೆಲೆಯಲ್ಲಿ ಉಪಸಭಾಪತಿ ಪ್ರಾಣೇಶ್ ಅವರು ಮತ ಎಣಿಕೆಗೆ ಸೂಚಿಸಿದರು. ಎರಡು ನಿಮಿಷಗಳ ಕಾಲ ಸದನದ ಬಾಗಿಲು ತೆರೆದು ಬಳಿಕ ಮುಚ್ಚಿ ಸಮಿತಿ ರಚನೆಗೆ ಮತ ಎಣಿಕೆ ಮಾಡಲಾಯಿತು. ವಿರೋಧ ಪಕ್ಷಗಳು ಬಹುಮತ ಹೊಂದಿದ್ದರಿಂದ ಕಾಯ್ದೆ ಜಾರಿಯಾಗದೆ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು. ಪರಿಶೀಲನಾ ಸಮಿತಿ ಪ್ರಸ್ತಾವಕ್ಕೆ ಅನುಮತಿ ಸಿಗುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ, ಪ್ರತಿಯಾಗಿ ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು.

ಇದನ್ನೂ ಓದಿ :ಪರಿಷತ್ ಸದಸ್ಯರಾಗಿ ಪುಟ್ಟಣ್ಣ ಪ್ರಮಾಣ ವಚನ ಸ್ವೀಕಾರ: ಲೋಕಸಭಾ ಚುನಾವಣೆಗೆ ಫಲಿತಾಂಶ ಮಾರ್ಗಸೂಚಿ ಎಂದ ಸಿಎಂ

Last Updated : Feb 21, 2024, 9:55 PM IST

ABOUT THE AUTHOR

...view details