ಬೆಂಗಳೂರು: ಮನ್ನಾರ್ ಗಲ್ಫ್ ಬಳಿ ವಾಯುಭಾರ ಕುಸಿತ ಮತ್ತು ಚಂಡಮಾರುತದ ಪರಿಣಾಮ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಬೀಳಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಎಲ್ಲೆಲ್ಲಿ ಮಳೆ?:
- ದಕ್ಷಿಣ ಒಳನಾಡಿನ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
- ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ.
ಬೆಂಗಳೂರು ನಗರ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 19 ಡಿಗ್ರಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ (ETV Bharat) "ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರತ ಕುಸಿತವಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಕೆಲವಡೆ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಹಾಗೂ ಕೆಲವೆಡೆ ಡಿ.12, 13ರಂದು ಸಾಧಾರಣ ಮಳೆಯಾಗುವ ಸಂಭವವಿದೆ. ಡಿ.14 ರಂದು ಮಳೆ ತಗ್ಗಲಿದೆ. ಮುಂದಿನ 12 ಗಂಟೆಗಳ ಅವಧಿಯಲ್ಲಿ ಚಂಡಮಾರುತವು ಪಶ್ಚಿಮ-ವಾಯುವ್ಯದಲ್ಲಿರುವ ದಕ್ಷಿಣ ತಮಿಳುನಾಡಿನ ಕಡೆಗೆ ತಿರುಗಿ ಮತ್ತು ಕ್ರಮೇಣ ದುರ್ಬಲಗೊಳ್ಳಲಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಇದನ್ನು ಓದಿ:ಜ.10 ರಿಂದ ಪ್ರಯಾಗರಾಜ್ ಮಹಾ ಕುಂಭಮೇಳ: IRCTCಯಿಂದ ವಿಶೇಷ ಟೆಂಟ್ ಸೌಲಭ್ಯ; ಬುಕಿಂಗ್ ಆರಂಭ