ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ; ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಪರಿಶೀಲನೆ - Lokayukta Raid
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ದಾಳಿ ನಡೆಸುತ್ತಿದ್ದು, ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಕಾರವಾರ:ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ರಾಜ್ಯಾದ್ಯಂತ ದಾಳಿ ನಡೆಸುತ್ತಿದ್ದಾರೆ. ಹಲವು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕಾರವಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಪ್ರಕಾಶ್ ಆರ್.ರೇವಣಕರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಇಲ್ಲಿನ ದೋಬಿಗಾಟ್‌ದಲ್ಲಿನ ಐಶ್ವರ್ಯ ರೆಸಿಡೆನ್ಸಿಯಲ್ಲಿರುವ ಇವರ ಮನೆ ಹಾಗೂ ಅಂಕೋಲಾದ ಅವರ್ಸಾದಲ್ಲಿನ ಮನೆ ಮೇಲೂ ದಾಳಿ ನಡೆದಿದೆ.
ಲೋಕಾಯುಕ್ತ ದಾಳಿ
ಇನ್ನುಳಿದಂತೆ, ಬಿಬಿಎಂಪಿ ಮುಖ್ಯ ಇಂಜಿನಿಯರ್ ರಂಗನಾಥ್ ಎಸ್ಪಿ, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ರೂಪ, ರಾಮನಗರ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯತೀಶ್ ಸೇರಿದಂತೆ ಹಲವು ಅಧಿಕಾರಿಗಳ ನಿವಾಸಿಗಳ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
130 ತನಿಖಾಧಿಕಾರಿಗಳು ಏಕಕಾಲದಲ್ಲಿ 60 ಸ್ಥಳಗಳಲ್ಲಿ ದಾಳಿ ಮಾಡುತ್ತಿದ್ದಾರೆ. 13 ಎಸ್ಪಿಗಳು, 12 ಡಿಎಸ್ಪಿಗಳು, 25 ಪೊಲೀಸ್ ಇನ್ಸ್ಪೆಕ್ಟರ್ಗಳು ಮತ್ತು 80 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಮನೆ ಪರಿಶೀಲನೆಯಲ್ಲಿ ಅಧಿಕಾರಿಗಳು
ದಾಳಿಗೊಳಗಾದ ಅಧಿಕಾರಿಗಳ ವಿವರ:
ಅಧಿಕಾರಿಗಳ ಹೆಸರು
ಹುದ್ದೆ
ದಾಳಿ ನಡೆದ ಸ್ಥಳಗಳು
1.ರಂಗನಾಥ್ ಎಸ್.ಪಿ.
ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್
ಬೆಂಗಳೂರಿನ 5 ಸ್ಥಳಗಳು
2.ರೂಪ
ಉಪ ಆಯುಕ್ತರು, ಅಬಕಾರಿ ಇಲಾಖೆ
ಉಡುಪಿಯ 5 ಸ್ಥಳಗಳು
3.ಪ್ರಕಾಶ್
ಜ್ಯೂನಿಯರ್ ಇಂಜಿನಿಯರ್
ಕಾರವಾರ, ಉ.ಕ. ಜಿಲ್ಲೆಯ 4 ಸ್ಥಳಗಳು
4.ಫಯಾಜ್ ಅಹಮದ್
ಅಸಿಸ್ಟೆಂಟ್ ಇಂಜಿನಿಯರ್
ಮೈಸೂರಿನ 12 ಸ್ಥಳಗಳು
5.ಜಯಣ್ಣ .ಬಿ.ವಿ.
ಮುಖ್ಯ ಕಾರ್ಯಕಾರಿ ಅಭಿಯಂತರ
ಕೊಡಗು
6.ಮಹೇಶ್ ಚಂದ್ರಯ್ಯ ಹೀರೆಮಠ್
ಅರಣ್ಯ ವಲಯದ ಅಧಿಕಾರಿ
ಧಾರವಾಡದ 6 ಸ್ಥಳಗಳು
7.ಶಿವಕುಮಾರಸ್ವಾಮಿ
ಎಕ್ಸಿಕ್ಯೂಟಿವ್ ಇಂಜಿನಿಯರ್
ಬೀದರ್ನ 4 ಸ್ಥಳಗಳು
8.ನಾಗರಾಜಪ್ಪ
ಅಸಿಸ್ಟೆಂಟ್ ಡೈರೆಕ್ಟರ್
ಕೋಲಾರದ 5 ಸ್ಥಳಗಳು
9.ಷಣ್ಮುಗಪ್ಪ
ಎಆರ್ಟಿಓ ಜಮಖಂಡಿ
ಬಾಗಲಕೋಟೆಯ 4 ಸ್ಥಳಗಳು
10.ಸದಾಶಿವಯ್ಯ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್
ಚಿಕ್ಕಬಳ್ಳಾಪುರದ 6 ಸ್ಥಳಗಳು
11.ಕೃಷ್ಣಗೌಡ
ದ್ವಿತೀಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ,
ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿ
ಮಂಡ್ಯದ 4 ಸ್ಥಳಗಳು
12.ಸದಾಶಿವ ಜಯಪ್ಪ
ಪಿಡಿಒ, ನಿಡಗುಂದಿ ಗ್ರಾಮ
ಬೆಳಗಾವಿಯ 3 ಸ್ಥಳಗಳು
ಧಾರವಾಡ ವರದಿ: ಧಾರವಾಡದ ರೇಂಜರ್ ಅರಣ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದ ನಿವಾಸಿ ಆರ್‌ಎಫ್‌ಒ ಮಹೇಶ ಹಿರೇಮಠ ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ.