ಬೆಂಗಳೂರು:ಜೂನ್ 13ರಂದು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟಕ್ಕೆ 4 ಸ್ಥಾನಗಳು ಮಾತ್ರ ಲಭ್ಯವಾಗಲಿದ್ದು, ಉಳಿದ 7 ಸ್ಥಾನಗಳು ಆಡಳಿತ ಪಕ್ಷ ಕಾಂಗ್ರೆಸ್ ಪಾಲಾಗಲಿವೆ. ನಾಲ್ಕು ಸ್ಥಾನಕ್ಕೆ ಬಿಜೆಪಿ ಹಾಗು ಜೆಡಿಎಸ್‌ನಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಉಭಯ ಪಕ್ಷಗಳಲ್ಲಿಯೂ ಚಾಲನೆ ಸಿಕ್ಕಿದೆ.
ಬಿಜೆಪಿಯಿಂದ ಆಯ್ಕೆಯಾಗಿದ್ದ ಎನ್.ರವಿಕುಮಾರ್, ರಘುನಾಥ್ ಮಲ್ಕಾಪುರೆ, ಡಾ.ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಮುನಿರಾಜು ಗೌಡ, ಎಸ್.ರುದ್ರೇಗೌಡ ಹಾಗು ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಅವರ ಸ್ಥಾನಗಳು ತೆರವಾಗುತ್ತಿವೆ.
ಎರಡೂ ಪಕ್ಷಗಳಿಂದ ಏಳು ಸ್ಥಾನ ತೆರವಾಗುತ್ತಿದ್ದರೂ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ತೇಜಸ್ವಿನಿ ಗೌಡ ಮತ್ತು ನಂಜುಂಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಟಿಕೆಟ್ ಹಂಚಿಕೆ ಸ್ವಲ್ಪ ಸುಲಭವಾಗಿದೆ. ಸಂಖ್ಯೆಗಳ ಆಧಾರದಲ್ಲಿ ಕೇವಲ ಮೂರು ಸ್ಥಾನ ಮಾತ್ರ ಬಿಜೆಪಿಗೆ ಸಿಗುತ್ತದೆ. ಇದರಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕರ್ತವ್ಯ ನಿರ್ವಹಿಸಿದ್ದ ಎನ್.ರವಿಕುಮಾರ್ಗೆ ಟಿಕೆಟ್ ಬಹುತೇಕ ಖಚಿತ.
ಯಡಿಯೂರಪ್ಪ ಬೆಂಬಲಿಗ ಎನ್ನುವುದು ಒಂದೆಡೆಯಾದರೆ ಸಂಘದ ಹಿನ್ನೆಲೆ, ಪೂರ್ಣಾವಧಿ ಸೇವೆ ಮಾಡಿ ಎಬಿವಿಪಿಯಿಂದಲೇ ಹೋರಾಟ ನಡೆಸಿ ಬಿಜೆಪಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಘಟನಾತ್ಮಕ ಚಟುವಟಿಕೆಯಲ್ಲಿ ಸಾಕಷ್ಟು ಚತುರತೆ ಹೊಂದಿರುವ ಹಿನ್ನೆಲೆಯಲ್ಲಿ ಅವರ ಹೆಸರಿಗೆ ಪಕ್ಷದ ಯಾವುದೇ ನಾಯಕರಿಂದಲೂ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಕಡಿಮೆ. ಇನ್ನು ಹಂಗಾಮಿ ಸಭಾಪತಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದ ರಘುನಾಥ್ ಮಲ್ಕಾಪುರೆ ಪುನರಾಯ್ಕೆ ಬಯಸಿದ್ದಾರೆ. ಪಕ್ಷದ ಮುಖಂಡರ ಮೂಲಕ ಹೈಕಮಾಂಡ್ಗೆ ಹೆಸರು ತಲುಪಿಸುವಂತೆ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಅವರಿಗೆ ಮತ್ತೊಮ್ಮೆ ಅವಕಾಶ ಕಡಿಮೆ ಎನ್ನಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಸಿ.ಟಿ.ರವಿ ಹೆಸರು ಚರ್ಚೆಯಲ್ಲಿದೆ. ಪಕ್ಷ ನಿಷ್ಠೆಯ ಜೊತೆಗೆ ಸಂಘಟನೆಯಲ್ಲಿ ಸಾಕಷ್ಟು ಸಮಯದಿಂದಲೂ ತೊಡಗಿಸಿಕೊಂಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾಗ ಪಕ್ಷದ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೇಂದ್ರದ ಸೇವೆಗೆ ತೆರಳಿದ್ದರು. ಅವರು ಸದ್ಯ ಚುನಾವಣೆಯಲ್ಲಿ ಸೋತಿರುವ ಕಾರಣದಿಂದಾಗಿ ಅವರಿಗೆ ರಾಜಕೀಯ ಪುನರ್ವಸತಿ ನೀಡಬೇಕು ಎನ್ನುವ ಚರ್ಚೆ ಆಗುತ್ತಿದೆ.
ಸದ್ಯ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಅವರ ಗೆಲುವಿನ ನಂತರ ಪ್ರತಿಪಕ್ಷ ನಾಯಕನ ಸ್ಥಾನ ತೆರವಾಗಲಿದೆ. ಸಿ.ಟಿ.ರವಿ ಅವರನ್ನು ಪರಿಷತ್‌ಗೆ ಕಳುಹಿಸಿ ಪ್ರತಿಪಕ್ಷ ಸ್ಥಾನ ನೀಡಬೇಕು. ಪರಿಷತ್‌ಗೆ ಪ್ರಬಲ ಪ್ರತಿಪಕ್ಷ ನಾಯಕರ ನೇಮಕವಾಗಬೇಕು ಎನ್ನುವ ಚರ್ಚೆ ಆಗಿದೆ. ಹಾಗಾಗಿ ಸಿ.ಟಿ.ರವಿ ಅವರ ಹೆಸರು ಪರಿಗಣನೆ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ಯಡಿಯೂರಪ್ಪ ಆಪ್ತರಾಗಿರುವ ಜೆ.ಸಿ.ಮಾಧುಸ್ವಾಮಿ ಹೆಸರೂ ಇದೆ. ವಿಧಾನಸಭಾ ಚುನಾವಣೆ ಸೋಲಿನ ನಂತರ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕಡೆಯ ಕ್ಷಣದಲ್ಲಿ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದರು. ಖುದ್ದು ಯಡಿಯೂರಪ್ಪ ತೆರಳಿ ಮನವೊಲಿಕೆ ಮಾಡಿದ್ದರು. ಹಾಗಾಗಿ ಪರಿಷತ್‌ಗೆ ಅವರನ್ನು ಕಳುಹಿಸಿ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಮೂಲಕ ಅವರ ಸಮಾಧಾನ ಪಡಿಸುವ ಲೆಕ್ಕಾಚಾರ ಇದೆ. ಆದರೆ, ಪರಿಷತ್ ಬಗ್ಗೆ ಮಾಧುಸ್ವಾಮಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಅವರು ಒಪ್ಪುವ ಸಾಧ್ಯತೆ ಬಗ್ಗೆ ಅನುಮಾನವಿದೆ ಆದರೂ ಸಿ.ಟಿ.ರವಿ ಅಥವಾ ಜೆ.ಸಿ.ಮಾಧುಸ್ವಾಮಿ ಇಬ್ಬರಲ್ಲಿ ಒಬ್ಬರ ಆಯ್ಕೆ ಸಾಧ್ಯತೆ ಇದೆ.
ನಳಿನ್ ಕುಮಾರ್ ಕಟೀಲ್ ಹೆಸರು ಚರ್ಚೆ:ಇನ್ನು ದೀರ್ಘಾವಧಿಯ ರಾಜ್ಯಾಧ್ಯಕ್ಷರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರೂ ಚರ್ಚೆಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರೂ ಪಕ್ಷದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಕಟೀಲ್ಗೆ ಅವಕಾಶ ನೀಡಬೇಕು ಎನ್ನುವುದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಚಿಂತನೆಯಾಗಿದೆ. ಇದರ ಜೊತೆಗೆ ಬಿಜೆಪಿ ಹೈಕಮಾಂಡ್ ರಾಜ್ಯ ಸಮಿತಿಯ ಪಟ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪುವುದಿಲ್ಲ ಅಚ್ಚರಿ ಆಯ್ಕೆಗೆ ಹೆಸರಾಗಿದೆ. ಪರಿಷತ್, ರಾಜ್ಯಸಭೆಗೆ ಹಲವು ಅಚ್ಚರಿ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಒಂದು ಸ್ಥಾನಕ್ಕೆ ಅಚ್ಚರಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಪರಿಷತ್ನಲ್ಲಿ ಭಾರತಿ ಶೆಟ್ಟಿ ಮಾತ್ರ ಬಿಜೆಪಿಯಿಂದ ಇರಲಿದ್ದು, ಮತ್ತೊಬ್ಬರಿಗೆ ಅವಕಾಶ ಕೊಡಬೇಕು ಎನ್ನುವ ಚರ್ಚೆ ಆಗುತ್ತಿದೆ. ಓರ್ವ ಮಹಿಳೆಗೆ ಅವಕಾಶ ಕೊಡಬೇಕು ಎನ್ನುವ ನಿರ್ಧಾರಕ್ಕೆ ಬಂದಲ್ಲಿ ಈ ಹಿಂದೆ ಪರಿಷತ್ ಸದಸ್ಯೆಯಾಗಿದ್ದ ನಟಿ ತಾರಾ, ಶೃತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ಮಾಜಿ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹೆಸರುಗಳಿವೆ. ತಾರಾ ಈಗಾಗಲೇ ಎಂಎಲ್ಸಿಯಾಗಿದ್ದರು. ಶೃತಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಹಿನ್ನಲೆಯಲ್ಲಿ ಮಂಜುಳಾ ಅವರಿಗೆ ಅವಕಾಶ ಹೆಚ್ಚು ಎನ್ನಲಾಗಿದೆ. ಈ ಹಿಂದೆ ಒಮ್ಮೆ ಮಂಜುಳಾ ಹೆಸರು ಪಟ್ಟಿವರೆಗೂ ಬಂದು ಅಂತಿಮ ಹಂತದಲ್ಲಿ ಕೈಬಿಡಲಾಗಿತ್ತು. ಹಾಗಾಗಿ ಅವರ ಹೆಸರು ಪರಿಗಣಿಸಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದೇನು?:ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಸಭೆಯಿಂದ ವಿಧಾನ ಪರಿಷತ್ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಮಗೆ 3 ಸ್ಥಾನ ಸಿಗಲಿವೆ. ಸೊತವರಿಗೆ, ಲೋಕಸಭಾ ಟಿಕೆಟ್ ವಂಚಿತರಿಗೆ ಅವಕಾಶ ಕೊಡಬೇಕು ಎನ್ನುವ ಮಾನದಂಡ ಇಲ್ಲ. ಈ ಸಂಬಂಧ ಯಾವುದೇ ಚರ್ಚೆ ಆಗಿಲ್ಲ. ಆದರೆ, ಒಂದೊಂದು ಸ್ಥಾನಕ್ಕೂ ಮೂವರ ಹೆಸರು ಕಳುಹಿಸಿಸಿಕೊಡಲು ಕೇಂದ್ರ ಸಮಿತಿ ಸೂಚಿಸಿದೆ. ಅದರಂತೆ ಪಕ್ಷದ ರಾಜ್ಯ ಘಟಕದ ಮಟ್ಟದಲ್ಲಿ ಚರ್ಚಿಸಿ ಹೆಸರುಗಳನ್ನು ಕಳುಹಿಸಲಿದ್ದೇವೆ'' ಎಂದು ತಿಳಿಸಿದ್ದಾರೆ.
ಜಿ.ಟಿ.ದೇವೇಗೌಡರ ಜೊತೆ ಮಾತುಕತೆ:ಜೆಡಿಎಸ್ ಒಂದು ಸ್ಥಾನ ಕಳೆದುಕೊಂಡರೂ ಆ ಸ್ಥಾನಕ್ಕೆ ಮತ್ತು ಆಯ್ಕೆ ಮಾಡುವ ಅವಕಾಶ ಪಡೆದುಕೊಂಡಿದೆ. ಹಾಗಾಗಿ ಈ ಚುನಾವಣೆಯಲ್ಲಿ ಜೆಡಿಎಸ್ಗೆ ಯಾವುದೇ ಲಾಭ ಹಾಗು ನಷ್ಟವಿಲ್ಲ. ನಿರ್ಗಮಿತ ಸದಸ್ಯ ಬಿ.ಎಂ.ಫಾರೂಕ್ ಪುನರಾಯ್ಕೆ ಬಯಸಿದ್ದಾರೆ. ಈ ಸಂಬಂಧ ದೇವೇಗೌಡರ ಜೊತೆ ಮಾತುಕತೆಗೂ ಯತ್ನಿಸಿದ್ದಾರೆ. ಆದರೆ ಅವರನ್ನು ಸಂಪರ್ಕ ಮಾಡಲಾಗಿಲ್ಲ. ಆದರೆ, ಕೋರ್ ಕಮಿಟಿ ಸದಸ್ಯ ಜಿಟಿಡಿ ಜೊತೆ ಮಾತುಕತೆ ನಡೆಸಿ ಟಿಕೆಟ್ ಸಂಬಂಧ ಚರ್ಚಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತು ಸದ್ಯದಲ್ಲೇ ಪಕ್ಷದ ಮುಖಂಡರ ಸಭೆ ನಡೆಯಲಿದ್ದು, ಸಭೆಯಲ್ಲಿ ನಿಮ್ಮ ಹೆಸರನ್ನೂ ಸೇರಿಸಿ ಚರ್ಚಿಸೋಣ ಎನ್ನುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಫಾರೂಕ್ ಜೊತೆ ಯಶವಂತಪುರ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಆಕಾಂಕ್ಷಿಯಾಗಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕೂಡ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದ ಕುಪೇಂದ್ರ ರೆಡ್ಡಿ ಪರಿಷತ್ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ: ಹೆಚ್.ಡಿ.ಕುಮಾರಸ್ವಾಮಿ - Council Election