ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಬಾಗಲಕೋಟೆ:ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ. ಅವರು ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆ. ಇಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವಸೂಲಿ ಗ್ಯಾಂಗ್ ಇಲ್ಲಿ ಆಡಳಿತ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಬಾಗಲಕೋಟೆಯಲ್ಲಿಂದು ಬೃಹತ್ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಟ್ಯಾಂಕರ್ ಹಬ್:ಕರ್ನಾಟಕವನ್ನು ಕಾಂಗ್ರೆಸ್ ಟ್ಯಾಂಕರ್ ಹಬ್ ಮಾಡಿಕೊಂಡಿದೆ. ನೀರಿಗಾಗಿ ಟ್ಯಾಂಕರ್ ದಂಧೆ ನಡೆಯುತ್ತಿದೆ. ಇದರಿಂದ ಸರ್ಕಾರ ಲೂಟಿ ಮಾಡುತ್ತಿದ್ದು, ಲಕ್ಷ ಲಕ್ಷ, ಕೋಟಿ ಕೋಟಿ ಹಗರಣ ಮಾಡುವ ಕನಸು ಕಾಣ್ತಿದ್ದಾರೆ. ಆದ್ದರಿಂದ ಮೇ.7ರಂದು ಈ ರೀತಿ ಲೂಟಿ ಮಾಡುವವರಿಗೆ ತಕ್ಕ ಶಿಕ್ಷೆ ಆಗಬೇಕಾಗಿದೆ ಎಂದರು.
ಇನ್ನು, ಬಾಗಲಕೋಟೆಯಲ್ಲಿ ಅಮೃತ ಯೋಜನೆಯಡಿ ರೈಲು ನಿಲ್ದಾಣ ನಿರ್ಮಾಣ ನಡೆಯುತ್ತಿದೆ. ಬಾದಾಮಿ ಐಹೊಳೆ, ಪಟ್ಟದಕಲ್ಲುಗಳಿಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ. ಹೆದ್ದಾರಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
2024ರ ಲೋಕಸಭಾ ಚುನಾವಣೆ ದೇಶದ ಭವಿಷ್ಯ ನಿರ್ಧರಿಸಲಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವದಲ್ಲೇ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಒಂದು ಓಟು ದೇಶವನ್ನು ದೊಡ್ಡ ಆರ್ಥಿಕ ಶಕ್ತಿಯನ್ನಾಗಿಸುತ್ತದೆ. ನಿಮ್ಮ ಓಟಿನಿಂದ ಮೋದಿಗೆ ಶಕ್ತಿ ಬರುತ್ತದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಿದರೆ ಕಾರ್ಯ ಸಿದ್ಧಿಸುತ್ತದೆ. ಮೋದಿ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧನಿದ್ದಾನೆ ಎಂದು ಭರವಸೆ ನೀಡಿದರು.
ಬಾಲಾಕೋಟ್ ವಾಯುದಾಳಿ ಪ್ರಸ್ತಾಪ:ಬಾಲಾಕೋಟ್ ಮೇಲಿನ ಏರ್‌ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಮೋದಿ ಪಾಕಿಸ್ತಾನಕ್ಕೆ ಕರೆ ಮಾಡಿರುವ ವಿಚಾರವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದರು. ಈ ಮೋದಿ ಎದೆಯುಬ್ಬಿಸಿ, ಕಣ್ಣಲ್ಲಿ ಕಣ್ಣಿಟ್ಟು ನಿಲ್ಲುತ್ತಾನೆಯೇ ಹೊರತು ಹಿಂದಿನಿಂದ ಯುದ್ಧ ಮಾಡುವುದಿಲ್ಲ ಎಂದು ವಿರೋಧಿಗಳಿಗೆ ತಿವಿದರು. ಮುಖ್ಯವಾಗಿ, ಬಾಲಾಕೋಟ್ ಏರ್ ಸ್ಟ್ರೈಕ್ ರಹಸ್ಯ ವಿವರಿಸಿದ ಅವರು, ಬಾಲಾಕೋಟ್ ಅಂದರೆ ಕೆಲವರು ಬಾಗಲಕೋಟೆ ಎಂದು ತಿಳಿದಿದ್ದರು ಎನ್ನುವ ಮೂಲಕ ವಿಪಕ್ಷಗಳನ್ನು ವ್ಯಂಗ್ಯವಾಡಿದರು.
ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ:ಬಿಜೆಪಿಸಂಸದ ಶ್ರೀನಿವಾಸ್ ಪ್ರಸಾದ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನರೇಂದ್ರ ಮೋದಿ, ಶ್ರೀನಿವಾಸ್ ಪ್ರಸಾದ್ ಅವರು ಸಾಮಾಜಿಕ ಜೀವನದಲ್ಲಿ ಬಡವರ, ದಲಿತರ ಸೇವೆ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿದ್ದಾರೆ. ಅವರ ಸೇವೆಯನ್ನು ಸದಾಕಾಲ ನೆನಪಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನಸಮಾವೇಶದ ವೇದಿಕೆಗೆ ಮೋದಿ ಬರುತ್ತಿದ್ದಂತೆ ಮೋದಿ..ಮೋದಿ ಎನ್ನುವ ಮೂಲಕ ಜನರು ಸ್ವಾಗತಿಸಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪ್ರಧಾನಿಗೆ ಬೆಳ್ಳಿಯ ದಂಡ ನೀಡುವ ಜೊತೆಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಕಂಬಳಿ ಹೊದ್ದುಕೊಂಡು ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಬಾಲಕಿಯೊಬ್ಬಳು ತಮ್ಮ ಫೋಟೊ ಹಿಡಿದು ನಿಂತಿರುವುದನ್ನು ಗಮನಿಸಿದ ಮೋದಿ ಭಾಷಣ ನಿಲ್ಲಿಸಿ, ಫೋಟೊ ತರಿಸಿಕೊಂಡರು. ಆ ಪೋಟೋದಲ್ಲಿ ನಿಮ್ಮ ಹೆಸರು, ಅಡ್ರೆಸ್ ಹಾಕಿ. ನಾನು ನಿಮಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಬಸವನಗೌಡ ಪಾಟೀಲ ಯತ್ನಾಳ ಸಮಾವೇಶದಲ್ಲಿ ಹಾಜರಿದ್ದರು.
ಇದನ್ನೂಓದಿ:ಗ್ಯಾರಂಟಿ ಪದಕ್ಕೆ ಅಪ್ಪ-ಅಮ್ಮ ನಾವೇ ಎಂಬಂತೆ ಕಾಂಗ್ರೆಸ್ನವರ ವರ್ತನೆ: ಸಿ.ಟಿ.ರವಿ - C T Ravi