ಬೆಂಗಳೂರು: ಚುನಾವಣಾ ಅಕ್ರಮ ಎಸಗಿ ಆಯ್ಕೆಯಾದ ಆರೋಪದ ಮೇಲೆ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಅರ್ಜಿಯಲ್ಲಿರುವ ಆರೋಪಗಳು ಊಹೆ ಮತ್ತು ಕಲ್ಪನೆಯ ಆಧಾರದಲ್ಲಿವೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಆಯ್ಕೆ ರದ್ದುಪಡಿಸಿ, ತಮ್ಮನ್ನು ಶಾಸಕರನ್ನಾಗಿ ಘೋಷಣೆ ಮಾಡಬೇಕು ಎಂದು ಕೋರಿ ಕೃಷ್ಣ ಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ನಡೆಸಿದರು.
ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ತಿಳಿಸಿರುವಂತೆ ಅರ್ಜಿಯಲ್ಲಿ ಭೌತಿಕ ಅಂಶಗಳನ್ನು ಹೊಂದಿಲ್ಲ ಕಾನೂನಿನಡಿ ಅಗತ್ಯವನ್ನು ಪೂರೈಸುವುದಿಲ್ಲ. ಇಡೀ ಅರ್ಜಿಯಲ್ಲಿನ ಆರೋಪಗಳು ಊಹೆ ಮತ್ತು ಕಲ್ಪನೆಯ ಆಧಾರದಲ್ಲಿವೆ. ಹೀಗಾಗಿ ಡಾ. ರಂಗನಾಥ್ ಅವರ ಆಯ್ಕೆ ಅಸಿಂಧು ಎಂಬುದಾಗಿ ಘೋಷಣೆ ಮಾಡಲು ಈ ಅಂಶಗಳು ಆಧಾರವಾಗುವುದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸುವುದಾಗಿ ನ್ಯಾಯ ಪೀಠ ತಿಳಿಸಿತು.
ಅರ್ಜಿದಾರರು ಆರೋಪಿಸುವ ಎಲ್ಲ ಅಂಶಗಳನ್ನು ಅಗತ್ಯ ಕಾರಣಗಳೊಂದಿಗೆ ನೀಡಬೇಕು. ಯಾವುದೇ ರೀತಿಯಲ್ಲಿಯೂ ಅಸ್ಪಷ್ಟವಾಗಿರಬಾರದು. ಇಲ್ಲವಾದಲ್ಲಿ ಅದು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಬರುವುದಿಲ್ಲ. ಅರ್ಜಿದಾರರ ಆರೋಪಗಳಿಗೆ ಯಾವದೇ ಆಧಾರಗಳಿಲ್ಲ. ಶಾಸಕ ರಂಗನಾಥ್ ಸಮ್ಮತಿಯೊಂದಿಗೆ ಅವರ ಏಜೆಂಟರ ವಿರುದ್ಧ ಆರೋಪಗಳು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಆರೋಪಗಳು ನಿರ್ದಿಷ್ಟ ಮತ್ತು ಸ್ಪಷ್ಟವಾಗಿಲ್ಲ. ಹೀಗಾಗಿ ಅರ್ಜಿಯ ವಿಚಾರಣೆ ಮುಂದುವರೆಸುವುದಕ್ಕೆ ಕಾನೂನಿನ ದುರ್ಬಳಕೆ ಆಗಲಿದೆ ಎಂದೂ ಹೇಳಿತು.
ಪ್ರಕರಣದಲ್ಲಿ ರಂಗನಾಥ್ ಪರ ಮತಯಾಚನೆಗೆ ಅಡುಗೆ ಸೆಟ್‌ಗಳನ್ನು ವಿತರಣೆ ಆರೋಪದಲ್ಲಿ ಬಂಧನಕೊಳಗಾಗಿದ್ದ ಆರೋಪಿಗಳು ಶಾಸಕರಾದ ರಂಗನಾಥ್ ಅವರಿಗೆ ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆರೋಪಿಗಳು ತನಿಖೆ ವೇಳೆ ರಂಗನಾಥ್ ಹೆಸರುನ್ನು ತಿಳಿಸಿಲ್ಲ. ಅಲ್ಲದೆ, ಚುನಾವಣಾ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ದಾಖಲಾಗಿರುವ ಪ್ರಕರಣಗಳು ಚುನಾವಣಾ ಅಕ್ರಮ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಆರೋಪ ಸಾಬೀತಾಗುವುದಿಲ್ಲ ಎಂದು ನ್ಯಾಯ ಪೀಠ ವಿವರಿಸಿತು.