ಕರ್ನಾಟಕ

karnataka

ದೇವಾಲಯಗಳನ್ನು ಆರ್​ಟಿಐ ಕಾಯಿದೆಯಿಂದ ಹೊರಗಿಡಲು ಕೋರಿದ್ದ ಅರ್ಜಿ ವಜಾ - Legal Protection From RTI

By ETV Bharat Karnataka Team

Published : Jun 12, 2024, 3:40 PM IST

ದೇವಾಲಯಗಳನ್ನು ಆರ್​ಟಿಐ ಕಾಯ್ದೆಯಿಂದ ಹೊರಗಿಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

high-court
ಹೈಕೋರ್ಟ್ (ETV Bharat)

ಬೆಂಗಳೂರು: ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್‌ಟಿಐ) ಹೊರಗಿಡಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಅಖಿಲ ಕರ್ನಾಟಕ ಹಿಂದೂ ದೇವಸ್ಥಾನಗಳ ಪುರೋಹಿತರು, ಆಗಮಿಕರು ಹಾಗೂ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರು ಅರ್ಚಕರಾಗಿರುವ ದೇವಾಲಯಗಳು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳಾಗಿವೆ. ಅಲ್ಲದೆ, ಸರ್ಕಾರದ ಸುತ್ತೋಲೆ ಪ್ರಸ್ತಾಪಿಸಿರುವುದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ಅರ್ಚಕರಿಗೆ ತೊಂದರೆ ನೀಡಿದಂತಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ರಾಜ್ಯ ಸರ್ಕಾರ ಅರ್ಜಿದಾರರ ದೇವಾಲಯಗಳಲ್ಲಿ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಒದಗಿಸಲು ಸಿಬ್ಬಂದಿ ನೇಮಿಸಿರುವ ಆದೇಶ, ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳಿಗೆ ಆದೇಶಿಸಿರುವ ಸರ್ಕಾರ ಸುತ್ತೋಲೆ ರದ್ದುಪಡಿಸಲಾಗದು ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಎನ್.ಆರ್.ನಾಗರಾಜ್, ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳು ಅಲ್ಲ ಎಂದು ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಹೈಕೋರ್ಟ್‌ಗಳಲ್ಲದೇ ಕರ್ನಾಟಕದ ಹೈಕೋರ್ಟ್ ಸಹ ಹೇಳಿದೆ. ಮುಖ್ಯವಾಗಿ, ದೇವಸ್ಥಾನಗಳು ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ದೇವಸ್ಥಾನಗಳ ಮೇಲೆ ಸರ್ಕಾರದ ಆರ್ಥಿಕ, ಭೌತಿಕ ಅಥವಾ ಆಡಳಿತಾತ್ಮಕ ನಿಯಂತ್ರಣ ಇರುವುದಿಲ್ಲ ಎಂದು ಮಾರ್ತಾಂಡವರ್ಮ ವರ್ಸಸ್ ಕೇರಳ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅರ್ಜಿಯಲ್ಲಿ ಕೋರಿರುವ ಅಂಶಗಳು: ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅರ್ಚಕರು, ವೇದ ವಿದ್ವಾಂಸರು, ಪುರೋಹಿತರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ವೈಯಕ್ತಿಕ ಮಾಹಿತಿ ಕೇಳುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ, ಹಣ ಮತ್ತು ಬೆಲೆ ಬಾಳುವ ವಸ್ತುಗಳಿಗೆ ಬೇಡಿಕೆ ಇಡುತ್ತಾರೆ. ನೀಡದಿದ್ದಲ್ಲಿ ದೇವರಿಗೆ ಮಾಡುವ ಹೋಮ, ಅಭಿಷೇಕಗಳನ್ನು ಮಾಡಿಕೊಡುವಂತೆ ಕೋರುತ್ತಾರೆ. ಭಕ್ತರು ದೇವರಿಗೆ ನೀಡುವ ದಾನಗಳಲ್ಲಿ ತಮಗೂ ಪಾಲು ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಇದರಿಂದ ಅರ್ಚಕರಿಗೆ ತಮ್ಮ ಕಾರ್ಯ ನಿರ್ವಹಣೆಗೆ ತೊಂದರೆಯಾಗುವಂತಾಗಿದೆ. ಹೀಗಾಗಿ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು.

ಅಲ್ಲದೆ, ದೇವಾಲಯಗಳು ಸಾರ್ವಜನಿಕ ಪ್ರಾಧಿಕಾರಗಳಲ್ಲ ಎಂದು ಘೋಷಿಸಬೇಕು. ಆ ಮೂಲಕ ದೇವಾಲಯಗಳನ್ನು ಕಾಯಿದೆಯಿಂದ ಹೊರಗುಳಿಸಬೇಕು. ಅಲ್ಲದೆ, ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ಒದಗಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಸಂಬಂಧ ರಾಜ್ಯ ಸರ್ಕಾರ 2007ರ ಜೂನ್ 16ರಂದು ಮತ್ತು 2017 ರ ಫೆಬ್ರವರಿ 3 ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು ರದ್ದುಮಾಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ದೇವಾಲಯಗಳನ್ನು ಆರ್​ಟಿಐ ಕಾಯ್ದೆಯಿಂದ ಹೊರಗಿಡಲು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ - Priests Petition Adjourned

ABOUT THE AUTHOR

...view details