ಬೆಂಗಳೂರು:ನ್ಯಾಯದಾನ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ನಲ್ಲಿ ಹಲವು ವಿನೂತನ ಕ್ರಮಗಳನ್ನು ಹಮ್ಮಿಕೊಂಡಿದ್ದು, ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರು.
ಹೈಕೋರ್ಟ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ತಾಂತ್ರಿಕ ಸುಧಾರಣೆಯು ಅಪಾರ ಬದಲಾವಣೆ ತಂದಿದೆ. ಇ-ಕೋರ್ಟ್, ಕಾಗದರಹಿತ ನ್ಯಾಯಾಲಯ, ಪ್ರಕರಣಗಳ ಗಣಕೀಕರಣ, ಪ್ರಕರಣದ ಆರಂಭದಿಂದ ಕೊನೆಯವರೆಗಿನ ದತ್ತಾಂಶ ನಿರ್ವಹಣೆ, ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯಿಂದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ ಎಂದು ಹೇಳಿದರು.
ಎಲ್ಲರ ಸ್ವಾತಂತ್ರ್ಯ ಕಾಪಾಡುವುದು, ನ್ಯಾಯದಾನ ಮಾಡುವುದು ಮತ್ತು ಭ್ರಾತೃತ್ವ ವೃದ್ಧಿಸುವುದು ಹಾಗು ನಮ್ಮ ಕಾನೂನು ವೃತ್ತಿಯ ಅತ್ಯುತ್ತಮವಾದದ್ದನ್ನು ನೀಡುವ ಮೂಲಕ ಜವಾಬ್ದಾರಿ ನಿಭಾಯಿಸಬೇಕಿದೆ. ಈ ಅತ್ಯುನ್ನತ ಹುದ್ದೆ ನೀಡಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಪ್ರಾಮಾಣಿಕತೆಗೆ ಪ್ರಾಶಸ್ತ್ಯ ನೀಡಿ:ಇದಾದ ಬಳಿಕ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ದಿನೇಶ್ ಕುಮಾರ್, ನ್ಯಾಯವಾದಿಗಳು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಭವಿಷ್ಯದಲ್ಲಿ ವಕೀಲ ವೃತ್ತಿ ಆಯ್ಕೆ ಮಾಡುವರು ದಾವೆಗಳ ಕುರಿತು ಪ್ರಜ್ಞೆ ಹೊಂದಿರಬೇಕಾದದ್ದು ಮುಖ್ಯ ಎಂದು ಸಲಹೆ ನೀಡಿದರು.