ಬೆಂಗಳೂರು: ಝೀಕಾ ವೈರಸ್ ಸೋಂಕಿನ ಬಗ್ಗೆ ಭಯಬೇಡ, ಎಚ್ಚರವಿರಲಿ. ಝೀಕಾ ಎಂಬುದು ಒಂದು ವೈರಸ್ ಸೋಂಕು. ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು, ಈ ವೈರಸ್ ಸೋಂಕನ್ನು ಸಹ ಹರಡುತ್ತವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಝೀಕಾ ವೈರಸ್ ಸೋಂಕಿನ ಲಕ್ಷಣಗಳು: ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ. ಗಂಧೆಗಳು (ದದ್ದುಗಳು), ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಬಹುತೇಕ ಝೀಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಉಳಿದಂತೆ ರೋಗಲಕ್ಷಣಗಳ ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಲ್ಲಿ ಜನಿಸಿದ ಶಿಶುವಿನ ತಲೆಯ ಗಾತ್ರದಲ್ಲಿ ಕಡಿಮೆ (ಮೈಕ್ರೋಸೆಫಾಲಿ) ಬೆಳವಣಿಗೆ ದೋಷ ಕಂಡುಬರಬಹುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿರಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಝೀಕಾ ವೈರಸ್ ಪತ್ತೆ ಹಚ್ಚುವ ವಿಧಾನ:ರೋಗ ಲಕ್ಷಣಗಳು ಕಂಡು ಬಂದವರ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪತ್ತೆ ಹಚ್ಚಬಹುದು. ಝೀಕಾ ವೈರಸ್ ಸೋಂಕು ದೃಢಪಟ್ಟಲ್ಲಿ ತೆಗೆದುಕೊಳ್ಳುವ ಕ್ರಮಗಳು ಹೀಗಿವೆ..
- ಝೀಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿರುವುದಿಲ್ಲ.
- ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಸಾಕಷ್ಟು ವಿಶ್ರಾಂತಿ ಪಡೆಯುವುದು.
- ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ಬಳಸುವುದು.
- ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿಗಳನ್ನು ಸೇವಿಸಬೇಕು ಹಾಗೂ ರೋಗ ಲಕ್ಷಣಗಳು ಹೆಚ್ಚಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.
- ಝೀಕಾ ವೈರಸ್ ಸೋಂಕಿತರು ಬೇರೆಯವರಿಗೆ ರೋಗ ಹರಡದಂತೆ ತಡೆಯಲು ಸೊಳ್ಳೆ ಪರದೆಯನ್ನು ಬಳಸುವುದು.