ಕರ್ನಾಟಕ

karnataka

ETV Bharat / state

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧಾರ - ANNA BHAGYA MONEY

ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ANNA BHAGYA MONEY
ಸಚಿವ ಕೆ.ಹೆಚ್.ಮುನಿಯಪ್ಪ ಸುದ್ದಿಗೋಷ್ಟಿ (ETV Bharat)

By ETV Bharat Karnataka Team

Published : Feb 19, 2025, 3:45 PM IST

ಬೆಂಗಳೂರು:ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹಣದ ಬದಲು ಅಕ್ಕಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ, ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ 170 ರೂ. ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆ.ಜಿ ಅಕ್ಕಿ ವಿತರಿಸಲು ತೀರ್ಮಾನಿಸಿದ್ದು, ಇದೇ ತಿಂಗಳಿನಿಂದ ಅಕ್ಕಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ (ETV Bharat)

ನಮಗೆ ಬೇಕಾಗಿರುವ 5 ಕೆ.ಜಿ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಬೇಕಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಂದಿಸಿದ್ದಾರೆ. ಈಗ ಕೇಂದ್ರ ಸಚಿವರು ಅಕ್ಕಿ‌ ಕೊಡಲು ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಮೊದಲು ಒಂದು ಕೆ.ಜಿ ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆ.ಜಿಗೆ 22.50 ರೂ.ನಂತೆ ನೀಡಲು ನಿರ್ಧರಿಸಿದೆ. ದರ ಪರಿಷ್ಕರಣೆ‌ಯ ಹಿನ್ನೆಲೆಯಲ್ಲಿ ‌ಮೂರು ತಿಂಗಳು ಹಣ ಹಾಕಿಲ್ಲ. ಒಂದು ವಾರದೊಳಗೆ ಸಕಾಲದಲ್ಲಿ ಹಣ ಹಾಕುತ್ತೇವೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ
5 ಕೆ.ಜಿ ಅಕ್ಕಿಗೆ 170 ರೂ.ಗಳಂತೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ ಎಂದು ಭರವಸೆ ನೀಡಿದರು.

ಫೆಬ್ರವರಿಯಿಂದ 10 ಕೆ.ಜಿ ಅಕ್ಕಿ ಕೊಡುವ ತೀರ್ಮಾನ ಮಾಡಿದ್ದೇವೆ. 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ, ಹಣ ಎರಡನ್ನೂ ಕೊಟ್ಟಿದ್ದೇವೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ನಗದು ವರ್ಗಾವಣೆ:ಅಕ್ಟೋಬರ್-2024ರಲ್ಲಿ 1,16,39,179 ಕಾರ್ಡ್​ಗಳ 4,12,16,838 ಫಲಾನುಭವಿಗಳಿಗೆ 676.79 ಕೋಟಿ ರೂ. ಡಿಬಿಟಿ ಬಿಡುಗಡೆ ಮಾಡಲಾಗಿದೆ. ಡಿಬಿಟಿ ಪ್ರಾರಂಭವಾದ ಜುಲೈ-2023ರಿಂದ ಅಕ್ಟೋಬರ್-2024ರವರೆಗೆ 10452.00 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳ ಡಿಬಿಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75 ಅಂತ್ಯೋದಯ/ಆದ್ಯತಾ ಪಡಿತರ ಕಾರ್ಡ್‌ಗಳನ್ನು ವಿತರಣೆ ಮಾಡಲು ಅವಕಾಶವಿದೆ. ಕರ್ನಾಟಕದ ಜನಸಂಖ್ಯೆ 2011ರ ಜನಗಣತಿ ಪ್ರಕಾರ ನಗರ ಮತ್ತು ಗ್ರಾಮೀಣ ಸೇರಿ ಶೇ.65.96 ವಿತರಣೆ ಮಾಡಲಾಗಿದೆ. (ಕೇರಳ-ಶೇ.45.59, ತಮಿಳುನಾಡು-48.81, ತೆಲಂಗಾಣ-53.93, ಆಂಧ್ರ ಪ್ರದೇಶ- ಶೇ.63-79, ಮಹಾರಾಷ್ಟ್ರ-ಶೇ.58.47) ರಷ್ಟು ವಿತರಣೆ ಮಾಡಿದ್ದೇವೆ ಎಂದು ವಿವರ ನೀಡಿದರು.

ಸಚಿವ ಕೆ.ಹೆಚ್.ಮುನಿಯಪ್ಪ (ETV Bharat)

ಭಾರತ ಸರ್ಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟ ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವ ಮೂಲಕ ಕರ್ನಾಟಕ ರಾಜ್ಯ ಹಸಿವು ಮುಕ್ತ ಕರ್ನಾಟಕವಾಗಿಸಿರುವುದು ನಮ್ಮ ಸರ್ಕಾರದ ಹೆಮ್ಮೆಯ ವಿಷಯ ಎಂದರು.

ಅನ್ನ ಸುವಿಧಾ:2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆ:ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು ಖರೀದಿ 366 ಕೇಂದ್ರಗಳನ್ನು ತೆರೆಯಲಾಗಿದೆ. 2024 ಡಿಸೆಂಬರ್ 1 ರಿಂದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ 2025, ಮಾರ್ಚ್ 31 ಆಗಿರುತ್ತದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಕೃಷಿಮಾರಾಟ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ರಾಗಿ, ಭತ್ತ, ಜೋಳ: ಕೇಂದ್ರ ಸರ್ಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ 4,290 ರೂ. ನಿಗದಿಪಡಿಸಿದೆ. ಮತ್ತು ಖರೀದಿ ಗುರಿಯನ್ನು 4.40 LMT ನಿಗದಿಪಡಿಸಿದೆ. ಈಗಾಗಲೇ 3.6 LMT Quantity ರಾಗಿ ನೀಡಲು 2,54,528 ರೈತರು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ 10 ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಅದೇ ರೀತಿ ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,300 ರೂ. “ಎ”ಗ್ರೇಡ್ ಭತ್ತಕ್ಕೆ 2,320 ರೂ. ನಿಗದಿಪಡಿಸಿದೆ. ಖರೀದಿ ಗುರಿಯನ್ನು 7.5 LMT ನಿಗದಿಪಡಿಸಿದೆ. ಈಗಾಗಲೇ 0.110 LMT ಭತ್ತ ನೀಡಲು 3,388 ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಪ್ರತಿ ರೈತರಿಂದ 50 ಕ್ವಿಂಟಲ್ ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಇನ್ನು ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 3,371 ರೂ., ಮಾಲ್ಡಂಡಿ ಜೋಳಕ್ಕೆ 3,421 ರೂ. ಕೇಂದ್ರ ನಿಗದಿಪಡಿಸಿದೆ. ಖರೀದಿ ಗುರಿಯನ್ನು 1.00 LMT ನಿಗದಿಪಡಿಸಿದೆ. ಈಗಾಗಲೇ 0.709 LMT ಜೋಳ ನೀಡಲು 17,527 ರೈತರು ನೋಂದಾಯಿಸಿಕೊಂಡಿರುತ್ತಾರೆ. ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಪ್ರತಿ ರೈತರಿಂದ 150 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ ಎಂದು ವಿವರಿಸಿದರು.

ಆಹಾರ ಇಲಾಖೆಯ ಸಮಗ್ರ ಸುಧಾರಣೆ: ಇಲಾಖೆಯ ಸಮಗ್ರ ಸುಧಾರಣೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ MSP ಖರೀದಿ ಪ್ರಕ್ರಿಯೆಯಲ್ಲಿ ಪಾದರ್ಶಕವಾದ ಅನುಷ್ಠಾನ ತರಲು ತಿಳಿಸಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಾನೂನು ಮಾಪನಶಾಸ್ತ್ರ ಇಲಾಖೆ ಪುನಾರಚನೆ ಮಾಡಿ, ಅವರಿಗೆ ಅವಶ್ಯಕ ವಾಹನಗಳನ್ನು ಒದಗಿಸಿ, ಇಲಾಖೆಯ ಅಧಿಕಾರಿಗಳು ತಪಾಸಣಾ ಹೆಚ್ಚು ಮಾಡಲು ಗುರಿ ನಿಗದಿಪಡಿಸಲಾಗಿತ್ತು. ಇದರಿಂದ 2023-24ರಲ್ಲಿ ರಾಜಸ್ವ ಸಂಗ್ರಹಕ್ಕೆ 53.33 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 83.19 ಕೋಟಿ ರೂ. ರಾಜಸ್ವವನ್ನು ಸಂಗ್ರಹಿಸಲಾಗಿತ್ತು. 2024-25ನೇ ಸಾಲಿನಲ್ಲಿ 66.00 ಕೋಟಿ ರೂ. ರಾಜಸ್ವ ಸಮಗ್ರ ಗುರಿಯಿತ್ತು. ಜನವರಿ 63.00 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಮಾರ್ಚ್-2025ರ ಅಂತ್ಯಕ್ಕೆ 20.00 ಕೋಟಿ ರೂ. ರಾಜಸ್ವ ಸಂಗ್ರಹಿಸುವ ನಿರೀಕ್ಷೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಪ್ರಕರಣವನ್ನು ದಾಖಲಿಸಲು ಮತ್ತು ದಂಡ ವಸೂಲಿ ಮಾಡಲು ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇಲಾಖೆಯ ಬಹುದಿನದ ಬೇಡಿಕೆ ಆಹಾರ ಇಲಾಖೆಯ ಕಛೇರಿಗಳ ಸಂಕೀರ್ಣ ಆಹಾರಸೌಧವನ್ನು 50.00 ಕೋಟಿ ರೂ. ವೆಚ್ಚದಲ್ಲಿ ಆಲಿ ಆಸ್ಕರ್ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಆಹಾರ ಇಲಾಖೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಪಡಿತರ ವಿತರಣೆ ಸಮರ್ಪಕವಾಗಿರಬೇಕು, ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಗೊಳಿಸಬೇಕು, ಸಗಟು ಮಳಿಗೆ ಮತ್ತು ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣಾ ಮಾಡಬೇಕು, ರಾಷ್ಟ್ರೀಯ ಭದ್ರತಾ ಕಾಯ್ದೆ ಆಶಯದಂತೆ ಪ್ರತಿಯೊಬ್ಬರಿಗೂ ಅನ್ನ, ಆಹಾರ ಸಿಗಬೇಕು.

ಈ ನಿಟ್ಟಿನಲ್ಲಿ ಇಲಾಖೆಯು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಇಲಾಖಾ ಕಾರ್ಯಕ್ರಮಗಳ ಜನಸ್ನೇಹಿಯಾಗಿ ಅನುಷ್ಠಾನಗೊಳ್ಳುವ ರೀತಿಯಲ್ಲಿ ಹೊಸ ತಂತ್ರಜ್ಞಾನ, ಬದಲಾವಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಸಚಿವ ಮುನಿಯಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿಗಮ‌ದ ನಿರ್ದೇಶಕ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಎನ್.ಬಾಬು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:2 ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಬಾಕಿ, ಇನ್ಮೇಲೆ ಪ್ರತಿ ತಿಂಗಳು ಹಾಕಲಾಗುವುದು: ಕೆ.ಹೆಚ್. ಮುನಿಯಪ್ಪ - ANNA BHAGYA AMOUNT PENDING

ABOUT THE AUTHOR

...view details