ಬೆಳಗಾವಿ:ಸರ್ಕಾರಿ ಪದವಿಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿರುವ 'ಸಿ.ಇ.ಟಿ-ಸಕ್ಷಮ' ಎಂಬ ವಿನೂತನ ಮತ್ತು ಸೃಜನಾತ್ಮಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಮೆಚ್ಚುಗೆಯ ಜೊತೆಗೆ ಚಾಲೆಂಜ್ ಫಂಡ್ ಯೋಜನೆಯಡಿ 10 ಲಕ್ಷ ರೂ. ಅನುದಾನ ಕೂಡ ಲಭಿಸಿದೆ.
ಜಿಲ್ಲೆಯ ಎಲ್ಲ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿ.ಇ.ಟಿ ಎದುರಿಸಲು ಸಕ್ಷಮಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಾತ್ಮಕ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಆರಂಭಿಸಿದ್ದಾರೆ.
ಏನಿದು ಸಿ.ಇ.ಟಿ-ಸಕ್ಷಮ ಕಾರ್ಯಕ್ರಮ?: ಜಿಲ್ಲಾ ಪಂಚಾಯತ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ CET-Saksham (ಸಿಇಟಿ-ಸಕ್ಷಮ) ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಕಾರ್ಯಕ್ರಮವಾಗಿದೆ. ಈ ಕುರಿತು ಈಟಿವಿ ಭಾರತ ಕೂಡ ವಿಶೇಷ ವರದಿ ಪ್ರಕಟಿಸಿತ್ತು.
ಸಿಇಟಿ ಸಕ್ಷಮ: ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ) (ETV Bharat) ಇದನ್ನೂ ಓದಿ:ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ 'ಸಿಇಟಿ-ಸಕ್ಷಮ': ಬೆಳಗಾವಿ ಜಿಪಂ ಸಿಇಒ ವಿನೂತನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ
ಇಂತಹ ಪ್ರಯೋಗಾತ್ಮಕ ಮತ್ತು ಸೃಜನಾತ್ಮಕ ಕಾರ್ಯಕ್ರಮದಲ್ಲಿ ಗುಣಮಟ್ಟದ ಗುರಿಗಳನ್ನು ಸಾಧಿಸಲು ಅನುಕೂಲವಾಗುವಂತೆ ಅಗತ್ಯ ಅನುದಾನವನ್ನು ಒದಗಿಸಲು ಸರ್ಕಾರವು 'ಚಾಲೆಂಜ್ ಫಂಡ್' ಸ್ಥಾಪಿಸಿದೆ. ಇದೀಗ ಸಿಇಟಿ-ಸಕ್ಷಮ ಪರಿಣಾಮಕಾರಿ ಜಾರಿಗೊಳಿಸಲು ಈ 'ಚಾಲೆಂಜ್ ಫಂಡ್' ಯೋಜನೆಯಡಿ ಸರ್ಕಾರವು 10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.
ತಮ್ಮ ಕನಸಿನ ಯೋಜನೆಯಾಗಿರುವ ಸಿಇಟಿ-ಸಕ್ಷಮ ಅನುಷ್ಠಾನಕ್ಕೆ ಸರ್ಕಾರವು ಅನುದಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಮುಂಬರುವ ದಿನಗಳಲ್ಲಿ ಸಿಇಟಿ-ಸಕ್ಷಮ ಸಮರ್ಪಕ ಅನುಷ್ಠಾನ, ವಿಶ್ಲೇಷಣೆ ಹಾಗೂ ದತ್ತಾಂಶ ಸಂಗ್ರಹಕ್ಕೆ ವಿಶೇಷ ಸಾಫ್ಟ್‌ವೇರ್ ರೂಪಿಸಲಾಗುವುದು. ಈ ಸಾಫ್ಟವೇರ್ ಮೂಲಕ ಪ್ರತಿಯೊಂದು ವಿದ್ಯಾರ್ಥಿಯ ಕಾರ್ಯಕ್ಷಮತೆಯನ್ನು ಒಂದು ಕಡೆ ಸಂಗ್ರಹಿಸಿ ಅದನ್ನು ವಿಶ್ಲೇಷಣೆಗೊಳಪಡಿಸುವ ಯೋಚನೆ ಇದೆ ಎಂದು ಅವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಉಪನ್ಯಾಸಕರು ಸಿಇಟಿ-ಸಕ್ಷಮ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಜಾರಿಗೊಳಿಸುವ ಮೂಲಕ ಅದನ್ನು ಯಶಸ್ವಿಗೊಳಿಸುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿ.ಪಂ.ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ಸಿಇಟಿ-ಸಕ್ಷಮ ವಿನೂತನ ಕಾರ್ಯಕ್ರಮದ ಮೂಲಕ ನಡೆಸಲಾಗುವ ಸಿದ್ಧತಾ ಪರೀಕ್ಷೆಗಳು ವಿದ್ಯಾರ್ಥಿಗಳ CET/NEET ಪರೀಕ್ಷೆಗಳನ್ನು ಎದುರಿಸಲು ಸಾಮರ್ಥ್ಯ ಬಲಪಡಿಸುವುದಲ್ಲದೇ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರಿಣತಿಯನ್ನು ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ಶಿವಮೊಗ್ಗ, ವಿಜಯಪುರ ಸೇರಿದಂತೆ ಏಳೆಂಟು ಜಿಲ್ಲೆಗಳ ಅಧಿಕಾರಿಕಾರಿಗಳ ತಂಡಗಳು ಬೆಳಗಾವಿಗೆ ಭೇಟಿ ನೀಡಿ 'ಸಿಇಟಿ-ಸಕ್ಷಮ' ಮಾದರಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಇಂತಹ ಪ್ರಯೋಗಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಕ್ರಮವು ಇಡೀ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ರಾಜ್ಯದ ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಉಚಿತ ನೀಟ್, ಜೆಇಇ, ಸಿಇಟಿ ಕೋಚಿಂಗ್ ಆರಂಭ