ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೆ ಸಂಘರ್ಷ ಉಂಟಾಗುವ ಲಕ್ಷಣ ಗೋಚರಿಸಿದೆ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2024ನ್ನು ಹಿಂಪಡೆಯುವಂತೆ ಸಲಹೆ ನೀಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಆ ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
ಜೊತೆಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಮಾದರಿಯಲ್ಲಿ 'ಮೈಸೂರು ಅಭಿವೃದ್ಧಿ ಪ್ರಾಧಿಕಾರ' ರಚಿಸಲು ರೂಪಿಸಿದ 'ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ–2024' ಕೆಲ ಸ್ಪಷ್ಟೀಕರಣ ಕೋರಿ ಕಡತವನ್ನೂ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024ನ್ನು ಹಿಂದಿರುಗಿಸಿ ರಾಜ್ಯಪಾಲರು ವ್ಯಕ್ತಪಡಿಸಿದ ಆಕ್ಷೇಪಗಳು-
- ಅನಗತ್ಯ ಸಂಘರ್ಷ ಮತ್ತು ಒಡಕುಂಟು ಮಾಡುವ ಯತ್ನ. ಈ ರೀತಿಯ ದುಸ್ಸಾಹಸ ಮಾಡಬೇಡಿ.
- ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಸದ್ಯ ಜಾರಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ಅವಕಾಶಗಳಿವೆ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯು ದೀರ್ಘಾವಧಿಯಿಂದ ಖಾಲಿ ಇದೆ. ಪದೇ ಪದೆ ನೆನಪು ಮಾಡಿದ್ದರೂ ಸಂಬಂಧಿಸಿದ ಇಲಾಖೆಯು ಕುಲಪತಿ ನೇಮಕಕ್ಕೆ ಅರ್ಜಿ ಆಹ್ವಾನಿಸಿಲ್ಲ. ಸಕಾರಣ ಇಲ್ಲದೆ ಹಾಗೂ ಉದ್ದೇಶಪೂರ್ವಕವಾಗಿ ಕುಲಪತಿ ನೇಮಕಾತಿ ತಡೆ ಹಿಡಿಯಲಾಗಿದೆ.
- ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಈ ಮಸೂದೆಯನ್ನು ರಾಜ್ಯ ಸರ್ಕಾರ ಹಿಂಪಡೆಯುತ್ತದೆ ಎಂಬ ಭರವಸೆಯಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ ವಾಪಸ್:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ 'ಮೈಸೂರು ಅಭಿವೃದ್ಧಿ ಪ್ರಾಧಿಕಾರ' ರಚಿಸುವ 'ಮೈಸೂರು ಅಭಿವೃದ್ದಿ ಪ್ರಾಧಿಕಾರ ಮಸೂದೆ 2024'ಯನ್ನೂ ರಾಜ್ಯಪಾಲರು ಸರ್ಕಾರಕ್ಕೆ ಹೆಚ್ಚಿನ ಸ್ಪಷ್ಟನೆ ಕೋರಿ ಹಿಂದಿರುಗಿಸಿದ್ದಾರೆ.
- ಮುಡಾಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಆಯೋಗ, ಇ.ಡಿ ಮತ್ತು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಹಲವು ಪ್ರಕರಣಗಳೂ ನ್ಯಾಯಾಲಯಗಳಲ್ಲಿವೆ.
- ಇಂತಹ ಸಂದರ್ಭದಲ್ಲಿ ಮುಡಾಗೆ ಹೊಸ ಸ್ವರೂಪ ಕೊಡುವುದು ಸೂಕ್ತವೇ?.
- ನನ್ನ ಪ್ರಕಾರ ಎಲ್ಲ ತನಿಖೆಗಳು ಮುಕ್ತಾಯವಾದ ಬಳಿಕ ಕಾಯ್ದೆ ರೂಪಿಸುವುದು ಸೂಕ್ತ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಹಿಂದಿರುಗಿಸಿದ ರಾಜ್ಯಪಾಲರು: ಕೇಳಿದ ಸ್ಪಷ್ಟೀಕರಣವೇನು?