ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆಗಸ್ಟ್ 1, 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
5-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆಎಎಸ್ಎಸ್) ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ. 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ಆದೇಶ ಹೊರಡಿಸಲಾಗಿದೆ. 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತ್ರತವಾದ ಆದೇಶಿಸಲಾಗಿದೆ.