ಕರ್ನಾಟಕ

karnataka

ಮುಡಾ ಅಕ್ರಮ ಆರೋಪ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶ - MUDA Case

By ETV Bharat Karnataka Team

Published : Jul 14, 2024, 11:06 PM IST

ಮುಡಾ ಅಕ್ರಮ ಪ್ರಕರಣ ಸಂಬಂಧ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶ
ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶ (ETV Bharat)

ಬೆಂಗಳೂರು:ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಪ್ರತಿಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ.

ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಈ ವಿಚಾರವಾಗಿ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧರಾಗಿವೆ. ಈ ಮಧ್ಯೆ ರಾಜ್ಯ ಸರ್ಕಾರ ಮುಡಾ ಅಕ್ರಮ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಆದೇಶ ಹೊರಡಿಸಿದೆ. ಆರೋಪಗಳ ಬಗ್ಗೆ ವಿಚಾರಣೆಯನ್ನು ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ.

ನ್ಯಾಯಾಂಗ ಆಯೋಗ ರಚನೆ ಆದೇಶದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿದೆ. ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದಿದೆ.

ತನಿಖೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.‌ ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸುವಂತೆ ಸೂಚನೆ ನೀಡಲಾಗಿದೆ.

ವಿಚಾರಣೆ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗ ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲ ಕಡತಗಳು, ದಾಖಲಾತಿಗಳನ್ನು ಒದಗಿಸಬೇಕು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಆದೇಶಿಸಿದೆ.

ಇದನ್ನೂ ಓದಿ:ಕಬಿನಿಯಿಂದ ತಮಿಳುನಾಡಿಗೆ ನಿತ್ಯ 8,000 ಕ್ಯುಸೆಕ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ: ಸಿಎಂ

ABOUT THE AUTHOR

...view details