ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಕಾರ್ಯ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸಬಾರದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಮತ ಎಣಿಕೆ ಕಾಜೂ.4ರಂದು ನಡೆಯಲಿದೆ. ಎಣಿಕೆ ಕಾರ್ಯದ ಪೂರ್ವಸಿದ್ಧತಾ ಕಾರ್ಯಗಳು ಹಾಗೂ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕೆಲಸಗಳು ಪ್ರಗತಿಯಲ್ಲಿವೆ. ಮಾದರಿ ನೀತಿ ಸಂಹಿತೆ ಜೂ.6ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹಂತದಲ್ಲಿ ಕೆಲವು ಇಲಾಖೆಗಳಲ್ಲಿನ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ಏರ್ಪಡಿಸುತ್ತಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ನಿರ್ವಹಿಸಲು ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣಾ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ.
ಹಾಗಾಗಿ, ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಹಾಗೂ ಪರಿಷತ್ ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸಬಾರದು ಹಾಗೂ ಈಗಾಗಲೇ ಸಭೆ ಮತ್ತು ವಿಡಿಯೋ ಸಂವಾದಗಳು ನಿಗದಿಯಾಗಿದ್ದಲ್ಲಿ ಮುಂದೂಡಲು ಅಗತ್ಯ ಕ್ರಮಕೈಗೊಳ್ಳಬೇಕು ಮತ್ತು ಸಭೆ/ವಿಡಿಯೋ ಸಂವಾದವನ್ನು ನಡೆಸಬೇಕಾದ ತುರ್ತು ಅಗತ್ಯವಿದ್ದಲ್ಲಿ ಚು.ಆಯೋಗದ ಕಚೇರಿಯೊಂದಿಗೆ ಸಮಾಲೋಚಿಸುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶಿಸುವಂತೆ ಅವರು ಕೋರಿದ್ದಾರೆ.
ಇದನ್ನೂ ಓದಿ:ಜಾಹೀರಾತು ನೀಡದಂತೆ ಕೋಲ್ಕತ್ತಾ ಹೈಕೋರ್ಟ್ ನಿರ್ಬಂಧ: ಸುಪ್ರೀಂ ಮೊರೆ ಹೋದ ಬಿಜೆಪಿ - Court order on BJP Advertisements