ಕರ್ನಾಟಕ

karnataka

ETV Bharat / state

ಹೆಚ್​​ಎಂಟಿ ವಶದಲ್ಲಿರುವ 14,300 ಕೋಟಿ ಬೆಲೆಯ ಅರಣ್ಯ ಭೂಮಿ ಹಿಂಪಡೆಯಲು ಕ್ರಮ: ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ - CABINET MEETING

ಹೆಚ್‌ಎಂಟಿ ಕಾರ್ಖಾನೆಯ ವಶದಲ್ಲಿರುವ ಅರಣ್ಯ ಭೂಮಿಯನ್ನು ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಕಾನೂನು ಸಚಿವ ಹೆಚ್.ಕೆ.ಪಾಟೀಲ್
ಕಾನೂನು ಸಚಿವ ಹೆಚ್.ಕೆ.ಪಾಟೀಲ್ (ETV Bharat)

By ETV Bharat Karnataka Team

Published : Jan 17, 2025, 6:59 AM IST

ಬೆಂಗಳೂರು: ಹೆಚ್‌ಎಂಟಿ ಲಿಮಿಟೆಡ್‌ನ ಸ್ವಾಧೀನದಲ್ಲಿರುವ 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ಸಚಿವ ರಾಜ್ಯ ಸಂಪುಟ ಸಭೆ ನಿರ್ಧರಿಸಿದೆ.

ಹೆಚ್‌ಎಂಟಿ ಕಾರ್ಖಾನೆಯು ಬೆಂಗಳೂರಲ್ಲಿ ಹೊಂದಿರುವ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದು ಮತ್ತು ಸಚಿವ ಸಂಪುಟದ ಪೂರ್ವಾನುಮತಿ ಅಥವಾ ಉನ್ನತ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆಯದೇ ಸುಪ್ರಿಂ ಕೋರ್ಟ್​ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿರುವ ರಾಜ್ಯ ಸರ್ಕಾರದ ಅರ್ಜಿ ಸಲ್ಲಿಕೆಗೆ ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಅರಣ್ಯ ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದು, 2015 ರಲ್ಲಿ ವಿವಾದಿತ ಭೂಮಿಯ ಡಿನೋಟಿಫಿಕೇಶನ್ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಕೋರಿದೆ. ಅಧಿಕಾರಿಗಳು 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಕಾಯ್ದಿರಿಸಿದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿರುವುದು ಕರ್ತವ್ಯ ಲೋಪವಾಗಿದೆ ಎಂದು ವಿವರಿಸಿದರು.

ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್​​ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು 2015ರಲ್ಲಿ ನಿಯಮಬಾಹಿರವಾಗಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐಎ) ಹಿಂಪಡೆಯುವ ಸಂಬಂಧ ಅರಣ್ಯ ಇಲಾಖೆ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಐಎ ಹಾಕಲಾಗಿತ್ತು. ಒಟ್ಟು 443 ಎಕರೆ ಅರಣ್ಯ ಭೂಮಿ ಸಂಬಂಧ ಐಎ ಹಾಕಿರುವುದನ್ನು ಹಿಂಡಪೆಯುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದರು.‌

ಅರಣ್ಯ ಅಧಿಕಾರಿಗಳು 2015ರಲ್ಲಿ ಮೀಸಲು ಅರಣ್ಯ ಭೂಮಿಯನ್ಮು ಡಿನೋಟಿಫೈ ಮಾಡುವಂತೆ ಸುಪ್ರೀಂ ಕೋರ್ಟ್​ನಲ್ಲಿ ಐಎ ಸಲ್ಲಿಡಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನೆಲೆ ನಾಲ್ಕು ಮಂದಿ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ನಿವೃತ್ತ ಎಸಿಎಸ್ ಸಂದೀಪ್ ದಾವೆ, ನಿವೃತ್ತ ಪ್ರಧಾನ‌ ಕಾರ್ಯದರ್ಶಿ ವಿಜಯಕುಮಾರ್ ಗೋಗಿ, ಹಾಲಿ ಎಪಿಸಿಸಿಎಫ್ ಸ್ಮಿತಾ ಬಿಜೂರು ಹಾಗೂ ಆರ್.ಗೋಕುಲ್​​ಗೆ ಶೋಕಾಸ್ ನೊಟೀಸ್ ನೀಡಲಾಗಿದೆ.‌ ಕೆಲ ಅಧಿಕಾರಿಗಳನ್ನು ಅಮನಾತು ಮಾಡಲಾಗಿದೆ ಎಂದು ತಿಳಿಸಿದರು.

ನರೇಗ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತರುವ 3,352 ಸಿಬ್ಬಂದಿಗೆ ವೈದ್ಯಕೀಯ ವಿಮಾ ಸೌಲಭ್ಯ
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯಗತಗೊಳಿಸುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,352 ಸಿಬ್ಬಂದಿಗಳಿಗೆ ಸಾಮೂಹಿಕ ವೈದ್ಯಕೀಯ ವಿಮೆ ಸೌಲಭ್ಯವನ್ನು ಒದಗಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದಕ್ಕಾಗಿ ವಾರ್ಷಿಕ 8.34 ಕೋಟಿ ರೂ. ವೆಚ್ಚ ಮಾಡಲಾಗುವುದು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಷ್ಠಾನ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಎಸ್​​ಐ ಸೌಲಭ್ಯ ಹೊಂದಿರುವ ಸಿಬ್ಬಂದಿಯನ್ನು ಹೊರತುಪಡಿಸಿದಂತೆ ಉಳಿದ ಸಿಬ್ಬಂದಿಗೆ ಸಾಮೂಹಿಕ ವೈದ್ಯಕೀಯ ವಿಮೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಾದ್ಯಂತ ನರೇಗ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹೊರಗುತ್ತಿಗೆ ನೌಕರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸುವ ಮೂಲಕ, ನೌಕರರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸುರಕ್ಷತಾ ಜಾಲವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರಾಜ್ಯ-ಚಾಲಿತ ಕಿಯೊನಿಕ್ಸ್ ಸಂಸ್ಥೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗೆ ಇದೇ ರೀತಿಯ ಗುಂಪು ಆರೋಗ್ಯ ವಿಮಾ ಯೋಜನೆ ಜಾರಿಯಲ್ಲಿದೆ. ನೌಕರರ ಆರೋಗ್ಯ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಸಾಧಾರಣ ವೇತನಕ್ಕಾಗಿ ದೈಹಿಕವಾಗಿ ಬೇಡಿಕೆಯ ಕೆಲಸಗಳನ್ನು ಮಾಡುವಲ್ಲಿ ನಿರತರಾಗಿರುವ ನರೇಗ ನೌಕರರಿಗೂ ವೈದ್ಯಕೀಯ ವಿಮೆ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಅಂಗಾಂಗ ಕಸಿ ಯೋಜನೆ ವಿಸ್ತರಣೆಗೆ ಸಂಪುಟ ಸಭೆ ಅಸ್ತು: ಕೈಗೊಂಡ ಇತರ ಪ್ರಮುಖ ತೀರ್ಮಾನಗಳೇನು?

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​ ನ್ಯೂಸ್​: 8ನೇ ವೇತನ ಆಯೋಗ ರಚನೆಗೆ ಗ್ರೀನ್​ ಸಿಗ್ನಲ್​: ಇಸ್ರೋದ ಮೂರನೇ ಲಾಂಚ್​ ಪ್ಯಾಡ್​ ಸ್ಥಾಪನೆಗೂ ಅಸ್ತು!

ABOUT THE AUTHOR

...view details