ಬೆಂಗಳೂರು:ರಾಜ್ಯ ಸರ್ಕಾರ ನುಡಿದಂತೆ ನಡೆದು, ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಕೊಟ್ಟ ವಚನಗಳನ್ನು ಪಾಲಿಸಿದೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ. ಜನರ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಿದೆ, ರಾಜ್ಯದ 7 ಕೋಟಿ ಜನರಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿದೆ. ಸಂತಸದ, ನೆಮ್ಮದಿಯ ಹೊಸ ಮನ್ವಂತರಕ್ಕೆ ಚಾಲನೆ ನೀಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಣ್ಣಿಸಿದರು.
ಕರ್ನಾಟಕ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದರು. ಆರ್ಥಿಕ ಅಭಿವೃದ್ಧಿ ಮಾತ್ರವಲ್ಲದೇ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯದಿಂದ ಕೂಡಿದ ಸರ್ವಾಂಗೀಣ ಅಭಿವೃದ್ಧಿಯನ್ನು ಸರ್ಕಾರ ಅನುಸರಿಸುತ್ತಿದೆ. ಈ ಕರ್ನಾಟಕ ಮಾದರಿಯನ್ನು ಇನ್ನಷ್ಟು ಸಶಕ್ತಗೊಳಿಸಿ ರಾಜ್ಯವನ್ನು ಇಡೀ ವಿಶ್ವದಲ್ಲಿ ವಿಶಿಷ್ಟವಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ. ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಗ್ಯಾರಂಟಿ ಯೋಜನೆಗಳು ಸಾಂತ್ವನ ಒದಗಿಸಿವೆ. ಯೋಜನೆಗಳಿಗೆ ಜನ ಸ್ಪಂದಿಸಿದ ರೀತಿಯೇ ಇದಕ್ಕೆ ಸಾಕ್ಷಿ ಎಂದರು.
ಪಂಚ ಗ್ಯಾರಂಟಿ ದಾಖಲೆ: ಸರ್ಕಾರ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಮಟ್ಟ ಸುಧಾರಿಸಿ, ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ನನ್ನ ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರ ಮಧ್ಯಮ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ.
ರಾಜ್ಯದಲ್ಲಿ ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ನಮ್ಮದು ಭವಿಷ್ಯದ ದೃಷ್ಟಿ ನೆಟ್ಟಿರುವ ಸರ್ಕಾರ. ರಾಜ್ಯದ ಶಿಕ್ಷಣ ನೀತಿ, ಕೃಷಿ, ಕೈಗಾರಿಕೆ ಮತ್ತು ಸೇವಾ ರಂಗಗಳಲ್ಲಿ ಸರ್ಕಾರ ಹೊಸ ಭರವಸೆಗಳನ್ನು ಹುಟ್ಟು ಹಾಕಿದೆ. ಅಭಿವೃದ್ಧಿ ಸರ್ಕಾರ ರಚನೆಯಾದ 8 ತಿಂಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ಮತ್ತು ಸವಾಂಗೀಣ ಅಭಿವೃದ್ಧಿ ಸರ್ಕಾರದ ಧ್ಯೇಯ ವಾಕ್ಯಗಳಾಗಿವೆ ಎಂದರು.
ಜಿಎಸ್ಟಿ ಸಂಗ್ರಹದಲ್ಲಿ ದಾಖಲೆ:ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ಸದೃಢವಾದ ಬೆಳವಣಿಗೆಯಾಗಿದೆ. ಬರಗಾಲವಿದ್ದರೂ ರಸ್ತೆ, ಕೃಷಿ, ಶಿಕ್ಷಣ, ನೀರು, ಆರೋಗ್ಯ, ಕೈಗಾರಿಕೆ, ಹೈನುಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರ ದಾಖಲಾರ್ಹ ಅಭಿವೃದ್ಧಿ ಸಾಧಿಸಿದೆ. ಬಜೆಟ್ನಲ್ಲಿನ ಘೋಷಣೆಗಳಲ್ಲಿ ಶೇ.97ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಗತಗೊಳಿಸಿರುವುದು ದಾಖಲೆಯಾಗಿದೆ.
ಕಂದಾಯ ಇಲಾಖೆಯ ಎಲ್ಲ ನ್ಯಾಯಾಲಗಳಲ್ಲಿ ಬಾಕಿ ಇದ್ದ 93,350 ಕೇಸ್ಗಳನ್ನು ನೂತನ ಸರ್ಕಾರ ಇತ್ಯರ್ಥ ಪಡಿಸಿದೆ. ಜೊತೆಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ವಿತರಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕಂದಾಯ ದಾಖಲೆ ಸಂರಕ್ಷಣೆಗಾಗಿ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ಪೋಡಿ ಮುಕ್ತ ಗ್ರಾಮ ಯೋಜನೆ ಮರು ಚಾಲನೆ ನೀಡಲಾಗಿದೆ. 223 ತಾಲೂಕುಗಳನ್ನ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಅದರಲ್ಲಿ 196 ತೀವ್ರ ಬರ ಪೀಡಿತ ತಾಲೂಕುಗಳಾಗಿವೆ. ಬರ ನಿರ್ವಹಣೆಗೆ 31 ಜಿಲ್ಲೆಗಳಿಗೆ ಸರ್ಕಾರ 324 ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನು ಎನ್ಡಿಆರ್ಎಫ್ ಅಡಿ 18171.44 ಕೋಟಿ ರೂ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಜ್ಞಾಪನಾ ಪತ್ರ ಸಲ್ಲಿಸಿದೆ. ಆದರೆ ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಭಾಷೆ ಬೆಳವಣಿಗೆ ಜೀವನ್ಮರಣದ ಸಂಗತಿ: ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ನಮ್ಮ ಜೀವನ್ಮರಣದ ಸಂಗತಿಯಾಗಿದೆ. ಭಾಷೆ ಮತ್ತು ಬಸವಣ್ಣ, ಕುವೆಂಪು ಮುಂತಾದವರು ಸಂಸ್ಕೃತಿಯನ್ನು ಉಳಿಸಿ, ಬೆಳಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಕಾಯ್ದೆಯನ್ನು ರೂಪಿಸಲಾಗಿದೆ. ಶೇ.60ರಷ್ಟು ಭಾಗ ನಾಮಫಲಕಗಳು ಕನ್ನಡದಲ್ಲೇ ಇರಬೇಕೆಂದು ಕಾನೂನು ಅನುಷ್ಠಾನ ಮಾಡಲು ಕ್ರಮವಹಿಸಿದ್ದೇವೆ.