ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆಷ್ಟು ದಿನ ಜೀವ ಇರುತ್ತೋ ಗೊತ್ತಿಲ್ಲ. ಸರ್ಕಾರ ಅಸ್ಥಿರತೆಯಿಂದ ಕೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದರು. ಇದೇ ವೇಳೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ವಿಧಾನಸಭಾ ಚುನಾವಣೆಗೆ ನೀಡುವ ಮಹತ್ವವನ್ನೇ ನೀಡಿ ಲೋಕಸಭಾ ಫಲಿತಾಂಶ ಪುನರಾವರ್ತಿಸುವಂತೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅರಮನೆ ಮೈದಾನದ ಗೇಟ್ ನಂ.3, ವೈಟ್ ಪೆಟಲ್ಸ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇವರಿಗೆ ತಕ್ಕ ಪಾಠ ಕಲಿಸಬೇಕು. ಈ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಅಸ್ಥಿರತೆ ಕಾಡುತ್ತಿದೆ. ಒಳಜಗಳ ಮಿತಿ ಮೀರಿದೆ. ಹಾದಿ ಬೀದಿ ಹೊಡೆದಾಟ ಮುಂದುವರೆದಿದೆ. ಸಿಎಂ ಸ್ಥಾನಕ್ಕಾಗಿ, ಉಪ ಮುಖ್ಯಮಂತ್ರಿಗಾಗಿ, ಅಭಿವೃದ್ಧಿಗಾಗಿ ಹಣ ಕೇಳುತ್ತಿರುವ ಕೂಗು ಕೇಳಿಸುತ್ತಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ 3ನೇ ಬಾರಿಗೆ ಅಧಿಕಾರಕ್ಕೇರಿದ್ದಾರೆ. ಇದು ದೇಶದ ಕಾರ್ಯಕರ್ತರ ಪರಿಶ್ರಮದ ಫಲ. ಇದೊಂದು ಐತಿಹಾಸಿಕ ಗೆಲುವು. 'ಇಂಡಿ' ಒಕ್ಕೂಟ ಪೊಳ್ಳು ಭರವಸೆಗಳ ಮೂಲಕ ಅಧಿಕಾರ ಪಡೆಯಲು ಯತ್ನಿಸಿತ್ತು. ಆದರೆ, ಪ್ರಜ್ಞಾವಂತ ಮತದಾರರು ಅವರ ಷಡ್ಯಂತ್ರವನ್ನು ಬೆಂಬಲಿಸಲಿಲ್ಲ ಎಂದರು.
ಕಾರ್ಯಕಾರಿಣಿ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಕಮಲಾ ಹಂಪನಾ, ಸಾಹಿತಿ ಕೆ.ಟಿ.ಗಟ್ಟಿ ಹಾಗು ಹತ್ಯೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ, ಚಿತ್ರದುರ್ಗದ ರೇಣುಕಾಸ್ವಾಮಿ, ಈಚೆಗೆ ನಡೆದ ಅಪಘಾತಗಳಲ್ಲಿ ಮೃತಪಟ್ಟವರು, ನಿಧನರಾದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಮಾಜಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಬಿ.ಶ್ರೀರಾಮುಲು, ನಿರ್ಮಲ್ ಕುಮಾರ್ ಸುರಾಣ, ಸಿ.ಟಿ.ರವಿ ಮೊದಲಾದವರು ವೇದಿಕೆಯಲ್ಲಿದ್ದರು.
ಇದನ್ನೂ ಓದಿ:ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ: ಸಿಎಂಗೆ ಬಿಎಸ್ವೈ ಸವಾಲು - BS yediyurappa