ಕರ್ನಾಟಕ

karnataka

ETV Bharat / state

ಕನ್ನಡ ನಾಮಫಲಕ ಕಡ್ಡಾಯ, ಬೆಳಗಾವಿಯಲ್ಲಿ ಬೆಂಗಳೂರು ಮಾದರಿ ಹೋರಾಟ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ - ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

ಕನ್ನಡ ನಾಮಫಲಕ ಕಡ್ಡಾಯಗೊಳಸಬೇಕೆಂದು ಬೆಳಗಾವಿಯಲ್ಲಿ ಬೆಂಗಳೂರು ಮಾದರಿ ಹೋರಾಟ ನಡೆಸಲಾಗುವುದೆಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು.

Kannada nameplate  Karave Narayangoud press meet  ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ  ಕನ್ನಡ ನಾಮಫಲಕ ಕಡ್ಡಾಯ
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

By ETV Bharat Karnataka Team

Published : Feb 23, 2024, 2:10 PM IST

Updated : Feb 23, 2024, 4:04 PM IST

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ

ಬೆಳಗಾವಿ:ಬೆಳಗಾವಿಯಲ್ಲೂ ಶೇ.60ರಷ್ಟು ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸದಿದ್ದರೆ ಬೆಂಗಳೂರಿನಲ್ಲಿ ಆದ ಹೋರಾಟ ಬೆಳಗಾವಿಯಲ್ಲಿ ಮರುಕಳಿಸಲಿದೆ. ಬೆಂಗಳೂರಿಗೆ ಆದ ಗತಿ ಬೆಳಗಾವಿಗೂ ಆಗಲಿದೆ. ಫೆ.28ರ ಬಳಿಕ 31 ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದ್ದು, ಮತ್ತೆ ಜೈಲಿಗೆ ಹೋದರೂ ಹೆದರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಗುಡುಗಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಕನ್ನಡಿಗರು ಒಟ್ಟಾರೆ ಬೆಂಬಲಿಸಿದ್ದು, ಕನ್ನಡ ನಾಮಫಲಕ ಕಡ್ಡಾಯ ಹೋರಾಟವನ್ನು. ಅದು ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಶೇ.60ರಷ್ಟು ಕನ್ನಡ ಬಳಕೆ ಮಾಡುವಂತೆ ಒತ್ತಡ ಹಾಕಿದ್ದೆವು. ಬೆಂಗಳೂರು ಅಷ್ಟೇ ಕನ್ನಡೀಕರಣ ಆಗಬಾರದು. ಇಡೀ ಕರ್ನಾಟಕ ರಾಜ್ಯವೇ ಕನ್ನಡೀಕರಣ ಆಗಬೇಕಿದೆ.‌ ಫೆ.28ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಸರ್ಕಾರದ ನಿರ್ಧಾರದ ಬಳಿಕ 31 ಜಿಲ್ಲೆಗಳಲ್ಲಿ ನನ್ನ ನೇತೃತ್ವದಲ್ಲೇ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.

ಕನ್ನಡದ ಗಟ್ಟಿ ಹೋರಾಟವನ್ನು ಸರ್ಕಾರ ಸಹಿಸಲಿಲ್ಲ. ಉದ್ಯಮಿಗಳ ಒತ್ತಡಕ್ಕೆ ಮಣಿದು ನಮಗೆ 14 ದಿನ ಜೈಲಿಗೆ ಕಳುಹಿಸಿದರು. 6ನೇ ಬಾರಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ, ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಷ್ಟು ಕಟುವಾಗಿ ಯಾವ ಸರ್ಕಾರವೂ ನಡೆದುಕೊಂಡಿಲ್ಲ. ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿದರು. ನಮ್ಮ ಹೋರಾಟ ಸಮರ್ಥಿಸಿಕೊಂಡು, ಖುಷಿ ಪಡಬೇಕಿತ್ತು. ನನ್ನ ಇಬ್ಬರು ಮಕ್ಕಳು ಹುಟ್ಟುವಾಗಲೂ ನಾನು ಜೈಲಲ್ಲೇ ಇದ್ದೆ. ಜೈಲು, ಕೋರ್ಟ್ ನನಗೇನು ಹೊಸತಲ್ಲ. ಮೂರು ತಿಂಗಳು ಜೈಲಿನಿಂದ ಹೊರಗೆ ಬರದಂತೆ ಷಡ್ಯಂತ್ರ ಮಾಡಿದ್ದರು. ಆದರೆ ನಮ್ಮ ವಕೀಲರು ದೊಡ್ಡ ಹೋರಾಟ ಮಾಡಿ ಜೈಲಿನಿಂದ ಹೊರಗೆ ಕರೆ ತಂದರು. ನಾರಾಯಣಗೌಡರ ಧ್ವನಿಯನ್ನು ನೂರು ಸಿದ್ದರಾಮಯ್ಯ ಸರ್ಕಾರ ಬಂದರೂ ಅಡಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಬೆಂಗಳೂರು ಮಾದರಿಯಲ್ಲೇ ಹೋರಾಟ:ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ಚಿಂತನೆ ಕರ್ನಾಟಕ ಸರ್ಕಾರಕ್ಕೆ ಬರುತ್ತಿಲ್ಲ. ಗಡಿ ವಿವಾದ ಸುಪ್ರೀಂಕೋರ್ಟ್​​ನಲ್ಲಿ ಇರೋದರಿಂದ ಇಲ್ಲಿ ನಾಮಫಲಕ ಕಡ್ಡಾಯಗೊಳಿಸಬಾರದು ಎಂದು ಎಂಇಎಸ್​ ಸುಪ್ರೀಂಗೆ ಹೋಗುತ್ತೇವೆ ಎಂದು ಹೇಳಿದೆ. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದು ಕೂಡ ಕನ್ನಡಮಯವಾಬೇಕು. ಅದಕ್ಕೆ ನಮ್ಮ ಹೋರಾಟ ಗಟ್ಟಿಯಾಗಿ ಇರಲಿದೆ. ಒಂದು ವೇಳೆ, ಎಂಇಎಸ್‌ ವಿರೋಧ ವ್ಯಕ್ತಪಡಿಸಿದರೆ ಬೆಂಗಳೂರು ಮಾದರಿಯಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಎಂಇಎಸ್ ಆಗಲಿ, ಶಿವಸೇನೆ ಆಗಲಿ ವಿರೋಧಿಸಿದ್ರೆ ನಾವು ಜಗ್ಗಲ್ಲ. ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್‌ ಸರ್ವನಾಶವಾಗಲಿ ಎಂದು ನಾರಾಯಣಗೌಡ ಗುಡುಗಿದರು.

ಬೆಳಗಾವಿ ಗಡಿ ವಿವಾದ, ಸರ್ಕಾರಿ ಕಚೇರಿಗಳ ಸ್ಥಳಾಂತರ ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಅನೇಕ ಬಾರಿ ಆಯಾ ಸರ್ಕಾರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಕ್ಕೊತ್ತಾಯಿಸಿದ್ದು, ಅನೇಕ ಬಾರಿ ಹೋರಾಟ ಮಾಡಿದ್ದೇವೆ ಎಂದ ನಾರಾಯಣಗೌಡ, 24ರಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಂಡಿದ್ದೇವೆ. ಸಭೆಯಲ್ಲಿ ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ಮೀಸಲು ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬೆಳಗಾವಿ ಅಖಂಡ ಜಿಲ್ಲೆ ಆಗಿರಬೇಕು. ಅಭಿವೃದ್ಧಿ ವಿಚಾರಕ್ಕೆ ಇಲ್ಲಿನ ಜನಪ್ರತಿನಿಧಿಗಳ ಭಾವನೆ ತಿಳಿದುಕೊಳ್ಳಬೇಕಾಗುತ್ತದೆ. ಅದರ ಸಾಧಕ, ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನಾರಾಯಣಗೌಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ರಾಜ್ಯ ಪ್ರಧಾನಕಾರ್ಯದರ್ಶಿ ಸಣ್ಣಿರಪ್ಪ, ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸಂಘಟನಾ ಕಾರ್ಯದರ್ಶಿ ಸುರೇಶ ಗವನ್ನವರ ಇದ್ದರು.

ಓದಿ:ದೆಹಲಿ ಚಲೋ ಮುಂದುವರಿಕೆ ಬಗ್ಗೆ ಇಂದು ನಿರ್ಧಾರ: ಯುವ ರೈತನ ಸಾವು ಖಂಡಿಸಿ ಕರಾಳ ದಿನ

Last Updated : Feb 23, 2024, 4:04 PM IST

ABOUT THE AUTHOR

...view details