ಕರ್ನಾಟಕ

karnataka

ETV Bharat / state

ಶರಾವತಿ ಹಿನ್ನೀರು ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದ 'ದ್ವೀಪ' ; 'ಬಂಜೆ ಬೆಂಕಿ'ಯ ಹಿರಿಯ ಸಾಹಿತಿ ನಾ. ಡಿಸೋಜ ಇನ್ನಿಲ್ಲ - NA DSOUZA PASSES AWAY

ಕನ್ನಡ ಖ್ಯಾತ ಹಿರಿಯ ಸಾಹಿತಿ ನಾ.ಡಿಸೋಜ ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ಸಾಗರದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಜ.7 ರಂದು ಅಂತ್ಯಕ್ರಿಯೆ ನೆರವೇರಲಿದೆ.

NA DSOUZA PASSES AWAY
ಹಿರಿಯ ಸಾಹಿತಿ ನಾ. ಡಿಸೋಜ ನಿಧನ (ETV Bharat)

By ETV Bharat Karnataka Team

Published : Jan 5, 2025, 10:11 PM IST

ಶಿವಮೊಗ್ಗ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ನಾ. ಡಿಸೋಜ (87) ಅವರು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಕುರಿತು ಅವರ ಪುತ್ರ ನವೀನ್ ಡಿಸೋಜ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ನಿವಾಸಿಯಾದ ನಾ. ಡಿಸೋಜ ಅವರು ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವರನ್ನು ಮಂಗಳೂರಿನ ಪಾಧರ್ ಮಿಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಸುಮಾರು 7:50 ರ ಸುಮಾರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ನಾ. ಡಿಸೋಜ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ಸಾಗರಕ್ಕೆ ತಂದು, ಅಲ್ಲಿನ ಗಾಂಧಿ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜನವರಿ 7 ರಂದು ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಾ. ಡಿಸೋಜ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೃಷಿ ಮಾಡಿದ್ದ ಇವರು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಪೂರ್ಣ ಹೆಸರು ನಾರ್ಬರ್ಟ್​ ಡಿಸೋಜ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ 1937 ರ ಜೂನ್ 6 ರಂದು ಜನಿಸಿದ್ದರು.

ಕಾದಂಬರಿ ರಚನೆ:ಪರಿಸರ ಕಾಳಜಿಯುಳ್ಳ ಸಾಹಿತಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯ ಒಳಗೊಂಡಂತೆ ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲೂ ಕೃಷಿ ನಡೆಸಿದ್ದಾರೆ. ಮೊದಲು ಇವರು ಪ್ರಪಂಚ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜ ಅವರು 1964 ರಲ್ಲಿ ತಮ್ಮ ಮೊದಲ ಕಾದಂಬರಿ 'ಬಂಜೆ ಬೆಂಕಿ' ಪ್ರಕಟಿಸಿದರು. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ - ಹೀಗೆ ಸುಮಾರು 75 ಕಾದಂಬರಿಗಳನ್ನು ಬರೆದಿದ್ದಾರೆ. 6 ಚಾರಿತ್ರಿಕ ಕಾದಂಬರಿ, 25 ಮಕ್ಕಳ ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು 550 ಕಥೆಗಳು, ಹಲವು ನಾಟಕಗಳು, ರೇಡಿಯೋ ನಾಟಕಗಳು, ಅನೇಕ‌ ಪತ್ರಿಕಾ‌ ಲೇಖನಗಳನ್ನು ಬರೆದಿದ್ದಾರೆ. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ.. ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿವೆ.

ಚಲನಚಿತ್ರವಾದ ಕಾದಂಬರಿಗಳು:ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದ ಪುರದ ದಿಟ್ಟ ಮಕ್ಕಳು, ಆಂತರ್ಯ ಕಾದಂಬರಿಗಳು ಚಲನಚಿತ್ರವಾಗಿವೆ. ಇದರಲ್ಲಿ ಗಿರೀಶ್ ಕಾರಸವಳ್ಳಿ ಅವರ ನಿರ್ದೇಶನದ ದ್ವೀಪ ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಭಾರತದ ಖ್ಯಾತ ನಟಿ ಸೌಂದರ್ಯ ಅವರು ಈ ಚಿತ್ರದಲ್ಲಿ ನಟಿಸಿ ರಾಷ್ಟ್ರೀಯ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದರು.

ಅಜ್ಞಾತ, ಒಂದು ಜಲಪಾತದ ಸುತ್ತ, ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಕಳ ಸಾಹಿತ್ಯವನ್ನೂ ನಾ.ಡಿಸೋಜ ರಚಿಸಿದ್ದಾರೆ.

ಪ್ರಶಸ್ತಿಗಳು:ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ವರ್ಧಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ನವದೆಹಲಿ ಕಳಾ ಪ್ರಶಸ್ತಿ ಸೇರಿ ಇನ್ನೂ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದರು.

80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ:2014 ರಲ್ಲಿ ಮಡಕೇರಿಯಲ್ಲಿ ನಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇವರು ಆಯ್ಕೆ ಆಗಿದ್ದರು.

ಹೋರಾಟಕ್ಕೂ ಸೈ:ನಾ.ಡಿಸೋಜರವರು ಸಾಹಿತ್ಯ ಅಷ್ಟೇ ಅಲ್ಲದೆ, ಪರಿಸರ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಗರ ತಾಲೂಕಿನ ಇಕ್ಕೇರಿಯಲ್ಲಿ ಗಣಿಗಾರಿಕೆ ವಿರುದ್ಧ ಹೋರಾಟ, ಶರಾವತಿ ನದಿಯ ಅಂಜುತೀರ್ಥದಿಂದ ಅರಬ್ಬಿ ಸಮುದ್ರದವರೆಗಿನ ನಡೆ, ತಾಳಗುಪ್ಪ ಬ್ರಾಡ್ಗೇಜ್ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಲೋಕೋಪಯೋಗಿ ಇಲಾಖೆಯಲ್ಲಿದ್ದ ಇವರು ಹೆಚ್ಚಾಗಿ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದ ವೇಳೆ ಸೇವೆ ಸಲ್ಲಿಸಿದ ಪರಿಣಾಮದಿಂದಲೇ ಇವರಿಗೆ ಶರಾವತಿ ಮುಳುಗಡೆ ಪ್ರದೇಶದ ಜನರ ಸಮಸ್ಯೆ ಹೆಚ್ಚಾಗಿ ತಿಳಿದಿತ್ತು. ಇದೇ ಕಾರಣದಿಂದ ಇವರು ದ್ವೀಪ, ಮುಳುಗಡೆ ಸೇರಿದಂತೆ ಅನೇಕ ಕಾದಂಬರಿ ಬರೆಯಲು ಸಾಧ್ಯವಾಯಿತು. ಇವರ ಮುಳುಗಡೆ ಊರಿಗೆ ಬಂದವರು ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ 'ಬಾಲ ಸಾಹಿತ್ಯ ಪುರಸ್ಕಾರ' ಸಂದಿದೆ.

ಇದನ್ನೂ ಓದಿ: ಖ್ಯಾತ ಚಿಂತಕ, ಲೇಖಕ ಪ್ರೊ.ಮುಜಾಫರ್‌ ಅಸ್ಸಾದಿ ಇನ್ನಿಲ್ಲ: ಸಿಎಂ ಸಂತಾಪ

ABOUT THE AUTHOR

...view details