ಬೆಂಗಳೂರು: ಖಾಲಿ ಇರುವ ಗ್ರೂಪ್ 'ಸಿ' ಹುದ್ದೆಗಳನ್ನು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಮತ್ತು ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುವುದರ ಮೂಲಕ ತುಂಬಲಾಗುತ್ತಿದೆ ಎನ್ನುವ ಲಿಖಿತ ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದ ಹೆಚ್ಎಎಲ್ನ ಹಿರಿಯ ಅಧಿಕಾರಿಗಳು ಈಗ ನೇಮಕಾತಿಯಲ್ಲಿ ಎಲ್ಲ ಭರವಸೆಗಳನ್ನು ಗಾಳಿಗೆ ತೂರಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ನಿರಾಕರಿಸಿದ್ದಾರೆ. ಇದು ಸರ್ಕಾರವನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆರೋಪಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಹೆಚ್ಎಎಲ್ನ ಕೇಂದ್ರೀಯ ಕನ್ನಡ ಸಂಘದ ಪ್ರತಿನಿಧಿಗಳೊಂದಿಗೆ ಡಾ.ಬಿಳಿಮಲೆ ಸಭೆ ನಡೆಸಿದರು. ಕನ್ನಡಕ್ಕೆ ಪ್ರಾತಿನಿಧ್ಯ ಕಲ್ಪಿಸುವಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗೆ ಪ್ರತಿಕ್ರಿಯಿಸಿರುವ ಹೆಚ್ಎಎಲ್ನ ಸಂಸ್ಥೆಯ ಅಪರ ಪ್ರಧಾನ ವ್ಯವಸ್ಥಾಪಕರು ಸಂಸ್ಥೆಯ ಗ್ರೂಪ್ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇ.90ಕ್ಕೂ ಹೆಚ್ಚಿನ ಉದ್ಯೋಗಗಳನ್ನು ಸ್ಥಳೀಯರಿಗೆ ಸಂಪೂರ್ಣ ಅವಕಾಶವನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಶೀಘ್ರದಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್ಎಎಲ್ ಸಂಸ್ಥೆಗೆ ಭೇಟಿ ನೀಡಿ ಈ ಕುರಿತಂತೆ ಸಮಗ್ರ ಪರಿಶೀಲನೆ ಕೈಗೊಳ್ಳಲಿದೆ. ಹೆಚ್ಎಎಲ್ನಲ್ಲಿ ಕನ್ನಡಿಗರ ಹಿತ ಕಾಯಲು ಪ್ರಾಧಿಕಾರವು ಬದ್ಧವಾಗಿದ್ದು, ಕೇಂದ್ರೀಯ ಕನ್ನಡ ಸಂಘದ ಹೋರಾಟಕ್ಕೆ ತನ್ನೆಲ್ಲಾ ನೈತಿಕ ಬೆಂಬಲವನ್ನು ನೀಡಲಿದೆ ಎಂದಿದ್ದಾರೆ.