ಬೆಂಗಳೂರು:ಇಲ್ಲಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 26ರಂದು ಕಂಬಳ (ಕೋಣಗಳ ಓಟ) ಸ್ಪರ್ಧೆ ನಡೆಸುತ್ತಿಲ್ಲ ಎಂಬುದಾಗಿ ಬೆಂಗಳೂರು ಕಂಬಳ ಸಮಿತಿಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬೆಂಗಳೂರು ಕಂಬಳ ಸಮಿತಿಗೆ ಸ್ಪರ್ಧೆ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪ್ರಾಣಿಗಳ ಹಿಂಸೆ ತಡೆಯಲು ಶ್ರಮಿಸುತ್ತಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಅನಿಮಲ್ಸ್ (ಪೆಟಾ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ, ಕಂಬಳ ಸಮಿತಿ ಪರ ವಕೀಲರು ಮಾಹಿತಿ ನೀಡಿದರು.
ಅಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ, ಬೇರೆ ಕಡೆ ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ಕೋರಿಲ್ಲ ಎಂದು ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ಪೆಟಾ ಪರ ವಕೀಲರು, ''ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡಲಾಗುತ್ತಿದೆ ಎಂಬ ವಿಚಾರವನ್ನು ನಮಗೆ ತಿಳಿಸಬೇಕು. ಆಗ ನಾವು ನ್ಯಾಯಾಲಯದ ಮುಂದೆ ಬರುತ್ತೇವೆ. ನವೆಂಬರ್ 9ರಂದು ದಕ್ಷಿಣ ಕನ್ನಡ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ಸಂದರ್ಭದಲ್ಲಿನ ಕೂಗಾಟದಿಂದ ಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಲಾಗಿದೆ'' ಎಂದು ಪೀಠಕ್ಕೆ ವಿವರಿಸಿದರು.
ಪ್ರಾಣಿಗಳ ಮೇಲೆ ಕ್ರೌರ್ಯ:ಇದಕ್ಕೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ''ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಕಾನೂನು ಪ್ರಕಾರ ಅನುಮತಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಪೆಟಾ ಆಕ್ಷೇಪ ಇರುವುದು ಪ್ರಾಣಿಗಳಿಗೆ ಕ್ರೌರ್ಯ ಉಂಟು ಮಾಡಲಾಗುತ್ತಿದೆ ಎಂಬುದಾಗಿದೆ. ಈಗ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ನಡೆಸಬೇಕೆ? ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಕಂಬಳ ಸ್ಪರ್ಧೆಯು ಕರ್ನಾಟಕದ ಸಂಸ್ಕೃತಿಗೆ ಸಂಬಂಧಿಸಿದ್ದು, ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಕೊಂಡೊಯ್ಯುವ ಸಂದರ್ಭ ಬಂದಿದೆ. ಇಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆಯೇ ಎಂಬ ಪ್ರಶ್ನೆ ಇದೆ. ಕುದುರೆ ರೇಸ್ ನಡೆದಾಗ ಕುದುರೆಗಳನ್ನು ಬೇರೆ ದೇಶಗಳಿಂದ ಆಮದು/ರಫ್ತು ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೂ ಅವುಗಳನ್ನು ಸಾಗಿಸಲಾಗುತ್ತದೆ. ಯಾವುದೇ ನಿರ್ಧಾರ ಕೈಗೊಂಡರೂ ಪೀಠಕ್ಕೆ ತಿಳಿಸಲಾಗುವುದು'' ಎಂದು ವಿವರಿಸಿದರು.
ಈ ಕುರಿತಂತೆ ಮಂಗಳವಾರ ವಿಚಾರಣೆ ವೇಳೆ ಪೆಟಾ ಪರ ವಕೀಲರು, ''ಕಂಬಳ ಕರಾವಳಿ ಕರ್ನಾಟಕದ ಒಂದು ಜನಪದ ಕ್ರೀಡೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಕಂಬಳ ಆಚರಣೆ ಮಾಡುವ ಪದ್ಧತಿ ಶತಮಾನಗಳಿಂದ ಸಾಗಿ ಬಂದಿದೆ. ಅದು ಆ ಭಾಗದ ಸಂಸ್ಕೃತಿಯ ಸಂಕೇತವಾಗಿದ್ದು, ಸ್ಥಳೀಯ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆದರೆ ಆ ನಿರ್ದಿಷ್ಟ ಪ್ರದೇಶದ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ಆಯೋಜನೆ ಮಾಡುವುದು ಒಪ್ಪುವಂತದಲ್ಲ. ಈ ಕುರಿತು ಸರ್ಕಾರವು ಹೊರಡಿಸಿದ್ದ ತಿದ್ದುಪಡಿ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ಕೂಡ ಕಳೆದ ವರ್ಷ ಎತ್ತಿಹಿಡಿದಿತ್ತು'' ಎಂದು ಪೀಠಕ್ಕೆ ವಿವರಿಸಿದರು.
ಅಲ್ಲದೆ, 2023ರಲ್ಲಿ ಮೊದಲ ಬಾರಿಗೆ ರಾಜಧಾನಿಯಲ್ಲಿ ಕಂಬಳ ಆಯೋಜನೆ ಮಾಡಲಾಯಿತು. ಈ ಬಾರಿ ಅ.26ಕ್ಕೆ ಕಂಬಳ ಸ್ಪರ್ಧೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನೂರಾರು ಕಿ.ಮೀ ದೂರದ ವಿವಿಧ ಭಾಗಗಳಿಂದ ಕೋಣಗಳನ್ನು ಟ್ರಕ್ಗಳ ಮೂಲಕ ಕರೆತರಲಾಗುತ್ತಿದೆ. ಸತತ 8 ಗಂಟೆಗಳಿಗೂ ಹೆಚ್ಚು ಕಾಲ ಟ್ರಕ್‌ಗಳಲ್ಲಿ ಕೂಡಿ ಹಾಕಬೇಕಾಗುತ್ತದೆ. ವಾಣಿಜ್ಯ ಉದ್ದೇಶದೊಂದಿಗೆ ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಒಪ್ಪುವಂತದಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಪರ್ಧೆಗೆ ಅವಕಾಶ ನೀಡಬಾರದು'' ಎಂದು ಮನವಿ ಸಲ್ಲಿಕೆಯಾಗಿತ್ತು.
ಇದನ್ನೂ ಓದಿ:ನ್ಯಾಯಾಲಯದ ಅನುಮತಿ ಇಲ್ಲದೇ ಫ್ಲೆಕ್ಸ್, ಹೋರ್ಡಿಂಗ್ಸ್ ಕುರಿತ ಬೈಲಾ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ