ಕಾರವಾರ: ಕುಸಿದು ಬಿದ್ದಿದ್ದ ಕಾಳಿ ಸೇತುವೆ ತೆರವು ಮಾಡುತ್ತಿದ್ದಾಗ ಫಿಲ್ಲರ್ ಕುಸಿದು ಸ್ಲ್ಯಾಬ್ ಸಹಿತ ನದಿಗೆ ಬಿದ್ದ ಪರಿಣಾಮ ಹೊಸ ಸೇತುವೆಗೆ ಸಂಭವಿಸಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಶುಕ್ರವಾರ ಈ ದುರ್ಘಟನೆ ನಡೆದಿದೆ. ಈ ವೇಳೆ ಯಾವುದೇ ಕಾರ್ಯಾಚರಣೆ ನಡೆಯದೇ ಇರುವ ಕಾರಣ ಸಂಭವಿಸಬಹುದಾಗಿದ್ದ ಇನ್ನಷ್ಟು ಹಾನಿ ತಪ್ಪಿದೆ.
ಗುರುವಾರ ಇದೇ ಸ್ಲ್ಯಾಬ್ ಮೇಲೆ 4-5 ಕಾರ್ಮಿಕರು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಕಳೆದ 4 ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕೆಲ ದಿನ ರಾತ್ರಿ 12 ಗಂಟೆಯವರೆಗೂ ಕಾರ್ಯಾಚರಣೆ ನಡೆಸುತ್ತಿದ್ದರು. ಈಗಾಗಲೇ ಶೇ.70ರಷ್ಟು ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ. ಆದರೆ ಇದೀಗ ಶುಕ್ರವಾರ ಬೆಳಗ್ಗೆ ವೇಳೆ ಘಟನೆ ಸಂಭವಿಸಿದ್ದು, ಈ ವೇಳೆ ಕೆಲಸಗಾರರಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಕಳೆದ ಆಗಸ್ಟ್ 7 ರಂದು ಮಳೆಯ ಅಬ್ಬರಕ್ಕೆ ಕಾಳಿ ಸೇತುವೆ ಕುಸಿದು ಬಿದ್ದಿತ್ತು. ಈ ವೇಳೆ ಸೇತುವೆ ಮೇಲೆ ಚಲಿಸುತ್ತಿದ್ದ ಲಾರಿ ಸಹ ನದಿಯಲ್ಲಿ ಮುಳುಗಡೆಯಾಗಿ ಅದೃಷ್ಟವಶಾತ್ ಲಾರಿಯ ಕ್ಯಾಬಿನ್ ಮೇಲೆ ನಿಂತುಕೊಂಡು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಸೇತುವೆ ತೆರವು ಕಾರ್ಯ ನಡೆಯುತ್ತಿದೆ. ಆದರೆ ಮುರಿದು ಬಿದ್ದ ಸೇತುವೆಯ ಒಂದು ಭಾಗ ನಿನ್ನೆ ತಡರಾತ್ರಿ ಏಕಾಏಕಿಯಾಗಿ ಪಿಲ್ಲರ್ ತಳಭಾಗದಿಂದ ಕಳಚಿ ಕುಸಿತ ಉಂಟಾಗಿದೆ. ಇದರಿಂದಾಗಿ ಫಿಲ್ಲರ್‌ಗೆ ಹೊಂದಿಕೊಂಡಿದ್ದ ಸೇತುವೆ ಮೇಲ್ಮುಖವಾಗಿ ನಿಂತುಕೊಂಡಿದೆ. ಪಕ್ಕದಲ್ಲೇ ಹೊಸ ಸೇತುವೆ ಇದ್ದು, ಮುರಿದ ಸೇತುವೆ ಹೊಸ ಸೇತುವೆಗೆ ತಾಗಿ ಹಾನಿಯಾಗುವುದು ತಪ್ಪಿದೆ.
ಕಾರವಾರ - ಗೋವಾ ಸಂಪರ್ಕ ಕೊಂಡಿ: ಇನ್ನು ಕಾರವಾರ-ಗೋವಾ ಸಂಪರ್ಕಿಸಲು ಈ ಸೇತುವೆಯೊಂದೇ ಸಂಪರ್ಕಕೊಂಡಿಯಾಗಿದೆ. ಕಾಳಿ ನದಿಯ ಮುರಿದ ಸೇತುವೆಯ ಭಾಗ ಒಂದೊಮ್ಮೆ ಹೊಸ ಸೇತುವೆಗೆ ಅಪ್ಪಳಿಸಿದ್ದಲ್ಲಿ ದೊಡ್ಡ ಮಟ್ಟದ ಹಾನಿ ಉಂಟಾಗುತಿತ್ತು. ಆದರೆ ಇದೀಗ ಆ ಸಮಸ್ಯೆಯಿಂದ ಪಾರಾದಂತಾಗಿದೆ. ಹಳೆಯ ಸೇತುವೆಯನ್ನು ತೆರವು ಮಾಡುವುದು ಸಹ ಅಷ್ಟೆ ಕಷ್ಟಕರವಾಗಿದ್ದು, ಸ್ವಲ್ಪ ಯಾಮಾರಿದ್ದರು ಹೊಸ ಸೇತುವೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ತೆರವು ಗುತ್ತಿಗೆ ಪಡೆದಿರುವ ಕಂಪನಿಯವರು ಎಚ್ಚರಿಕೆಯಿಂದ ಫಿಲ್ಲರ್ ತೆರವು ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇನ್ನು ಸೇತುವೆ ತೆರವು ಮಾಡುವ ಸಿಬ್ಬಂದಿ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ. ಸಾರ್ವಜನಿಕರ ದೃಷ್ಟಿಯಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸಿ ಕಾಮಗಾರಿ ಮಾಡುವಂತೆ ಸ್ಥಳೀಯ ವಿನಾಯಕ ನಾಯ್ಕ ಆಗ್ರಹಿಸಿದ್ದಾರೆ.