ದಾವಣಗೆರೆ : ತಾಲೂಕಿನ ಕೈದಾಳೆ ಗ್ರಾಮ ಕಳೆದ ಹಲವಾರು ದಶಕಗಳಿಂದ ಪವಾಡಗಳಿಗೆ ಪ್ರಸಿದ್ಧಿ ಪಡಿದಿದೆ. ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಲೋಕಕ್ಕೆ ಸವಾಲಾಗಿವೆ. ಹೌದು, ಶ್ರೀ ಕ್ಷೇತ್ರ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಮಾಲೆ ಹಾಕಿದರೆ ಕುಡಿತದ ಚಟವನ್ನು ವ್ಯಸನಿಗಳು ಬಿಡುತ್ತಾರೆ.
ಕುಡಿತದ ಚಟಕ್ಕೆ ಬಿದ್ದಿರುವ ಅಥವಾ ಅವರ ಕುಟುಂಬಸ್ಥರು ಬಂದು ದೀಕ್ಷೆ ಪಡೆದುಕೊಂಡು ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ಸಾಕು ಕುಡಿತದ ಚಟಕ್ಕೆ ಒಳಗಾಗುವುದಿಲ್ಲ. ಅಲ್ಲದೆ, ಮದ್ಯ ಸೇವನೆ ಬಗ್ಗೆ ಆಲೋಚನೆ ಸಹ ಮಾಡುವುದಿಲ್ಲ. ಸಾಕಷ್ಟು ಜನ ಮದ್ಯವನ್ನು ತ್ಯಜಿಸಿರುವ ಉದಾಹರಣೆಗಳಿವೆ. ಜೊತೆಗೆ ಆರೋಗ್ಯ, ಮನೆ ಸಮಸ್ಯೆ, ಮಕ್ಕಳು ಆಗದೆ ಇರುವುದು ಸೇರಿದಂತೆ ಇನ್ನೂ ಆನೇಕ ಸಮಸ್ಯೆಗಳಿಗೆ ಯಾವುದೇ ಔಷಧ ಇಲ್ಲದೇ ಮಲ್ಲಿಕಾರ್ಜುನ ಸ್ವಾಮಿ ಬಗೆಹರಿಸುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಭಕ್ತರಾದ ಪುನೀತ್, " ನಾನು ಚಿಕ್ಕಮಗಳೂರು ಜಿಲ್ಲೆಯವನು, ವಿಪರೀತ ಕುಡಿತದ ಚಟಕ್ಕೆ ಅಂಟಿಕೊಂಡು, ಮನೆ ಮಠಡದಿಂದ ದೂರ ಇದ್ದೆ. ನಮ್ಮ ಸಂಬಂಧಿ ಒಬ್ಬರು ಇಲ್ಲಿನ ವಿಳಾಸ ಹೇಳಿದರು. ತಕ್ಷಣ ನಮ್ಮ ಕುಟುಂಬದವರು ನಾನು ಒಬ್ಬನೆ ಮಗ ಎಂಬ ಕಾರಣಕ್ಕೆ ಧಾರ್ಮಿಕ ಕ್ಷೇತ್ರಕ್ಕೆ ಕರೆತಂದು ಮಾಲೆ ಹಾಕಿಸಿದರು. 6 ವರ್ಷದ ಹಿಂದೆ ಮಾಲೆ ಹಾಕಿಸಿದಾಗಿನಿಂದ ಮದ್ಯ ಮುಟ್ಟಿಲ್ಲ. ಇದೀಗ ಗುಟ್ಕಾ ಚಟ ಜಾಸ್ತಿ ಆಗಿದೆ. ಅದನ್ನು ಬಿಡಲು ಮತ್ತೆ ಸನ್ನಿಧಿಗೆ ಬಂದಿರುವೆ ಎಂದು ಹೇಳಿದರು.