ಕರ್ನಾಟಕ

karnataka

ETV Bharat / state

ಕಾರವಾರ ಜೈಲಿನಲ್ಲಿ ಸೊಳ್ಳೆ ಕಾಟ: ಕಿಟಕಿಗೆ ಮೆಶ್, ಗೋಡೆಗಳಿಗೆ ಬಣ್ಣ ಬಳಿಯಲು ಜೈಲಾಧಿಕಾರಿಗಳಿಗೆ ಸೂಚನೆ - JAIL INSPECTION

ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯರು, ಜೈಲಿನಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕಿಟಕಿಗೆ ಮೆಶ್, ಗೋಡೆಗಳಿಗೆ ಬಣ್ಣ ಬಳಿಯುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Judicial member of the State Human Rights Commission Vanthikodi who inspected the district jail
ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಎಸ್.ಕೆ.ವಂತಿಕೋಡಿ ಅವರಿಂದ ಕಾರಾಗೃಹ ಪರಿಶೀಲನೆ (ETV Bharat)

By ETV Bharat Karnataka Team

Published : Nov 12, 2024, 7:19 AM IST

ಕಾರವಾರ: ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಸೊಳ್ಳೆ ಕಡಿಯುವುದನ್ನು ತಡೆಯಲು ಜೈಲಿನ ಕಿಟಕಿಗಳಿಗೆ ಮೆಶ್ ಹಾಕಿಸಿ ಹಾಗೂ ಗೋಡೆಗಳಿಗೆ ಹೊಸದಾಗಿ ಬಣ್ಣ ಮಾಡಿಸುವಂತೆ ಕಾರಾಗೃಹ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ವಂತಿಕೋಡಿ ಸೂಚನೆ ನೀಡಿದ್ದಾರೆ.

ಜಿಲ್ಲಾ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಕಾರಾಗೃಹವಾಸಿಗಳು ಜೈಲಿನಲ್ಲಿ ಸೊಳ್ಳೆ ಸಮಸ್ಯೆಯ ಬಗ್ಗೆ ತಿಳಿಸಿದರು. ಈ ಕುರಿತಂತೆ ಜೈಲು ಕೊಠಡಿಯ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಸ್ ಅಳವಡಿಸುವಂತೆ ಸೂಚಿಸಿದ ಅವರು, ಜೈಲಿನ ಗೋಡೆಗಳಿಗೆ ಬಣ್ಣ ಮಾಡಿ ಹಲವು ವರ್ಷಗಳು ಕಳೆದಿರುವುದನ್ನು ಕಂಡು ಉತ್ತಮ ಗುಣಮಟ್ಟದ ಪೇಂಟ್ ಮಾಡಿಸುವುದು, ಕಾರಾಗೃಹದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡುವುದು ಮತ್ತು ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು.

ಕಾರಾಗೃಹದ ಪರಿಶೀಲನೆ (ETV Bharat)

ಕಾರಾಗೃಹದ ಅಡುಗೆ ಮನೆಗೆ ಭೇಟಿ ನೀಡಿ, ಸ್ವತ: ಆಹಾರ ಸೇವಿಸಿ, ಯಾವುದೇ ಕಾರಣಕ್ಕೂ ಆಹಾರದ ಗುಣಮಟ್ಟದಲ್ಲಿ ಕೊರತೆ ಕಂಡುಬಾರದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ತಾಜಾ ಮತ್ತು ಗುಣಮಟ್ಟದ ಕಾಳುಗಳು ಮತ್ತು ತರಕಾರಿಗಳನ್ನು ಬಳಕೆ ಮಾಡುವಂತೆ ಹಾಗೂ ಕೊಠಡಿಗಳು ಮತ್ತು ಶೌಚಾಲಯಗಳಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ಕೊಟ್ಟರು.

ಕಾರಾಗೃಹವಾಸಿಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಏನಾದರೂ ಸಮಸ್ಯೆಗಳಿವೆಯೇ, ಊಟ ಸರಿಯಿದೆಯೇ, ಮೂಲಭೂತ ಸೌಲಭ್ಯಗಳು ಸರಿಯಿವೆಯೇ, ಎಲ್ಲರನ್ನು ವಿಚಾರಣೆಗೆ ಕೋರ್ಟ್​ಗೆ ಹಾಜರುಪಡಿಸುತ್ತಿದ್ದಾರೆಯೇ, ವಿಸಿ ಮೂಲಕ ವಿಚಾರಣೆ ನಡೆಯುತ್ತಿದೆಯೇ, ವಕೀಲರ ನೇಮಕ ಆಗಿದೆಯೇ? ಎಂದು ವಿಚಾರಿಸಿದರು. ಈ ಕುರಿತಂತೆ ಯಾವುದೇ ಸಮಸ್ಯೆ ಇಲ್ಲವೆಂದು ಕಾರಾಗೃಹವಾಸಿಗಳು ತಿಳಿಸಿದರು. ಇದೇ ವೇಳೆ, ಜೈಲಿನಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರು.

ಕಾರಾಗೃಹದ ಪರಿಶೀಲನೆ (ETV Bharat)

ಬೆಳಗಾವಿ ಕಾರಾಗೃಹದ ಸಹಾಯಕ ಅಧೀಕ್ಷಕ ಕೃಷ್ಣಮೂರ್ತಿ, ಕಾರವಾರ ಕಾರಾಗೃಹದ ಪ್ರಭಾರ ಅಧೀಕ್ಷಕ ಫಕೀರಪ್ಪ ತಮ್ಮಣ್ಣ ದಾಂಡೇನವರ್, ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ರಮೇಶ್ ಹೂಗಾರ್ ಉಪಸ್ಥಿತರಿದ್ದರು. ನಂತರ ಕಾರವಾರ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಸಿನಿಮಾ ನಿರ್ದೇಶಕನಾಗಬೇಕಿದ್ದವ ಪತ್ನಿಯ ಗೆಳೆಯನ ಕೊಂದು ಜೈಲು ಸೇರಿದ್ದ: ಈಗ 42 ಕಳ್ಳತನ ಕೇಸ್​ನಲ್ಲಿ ಮತ್ತೆ ಅರೆಸ್ಟ್

ABOUT THE AUTHOR

...view details