ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶನ ನಿಮಜ್ಜನ ಬಳಿಕ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂಬುದು ಈ ಭಾಗದ ಜನರ ನಂಬಿಕೆ.
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಜೋಕುಮಾರ ಎಂದು ಕರೆಯುತ್ತಾರೆ. ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ.
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ; ಬೆನಕನ ಅಮಾವಾಸ್ಯೆಯ ಬಳಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಆರನೇ ದಿನಕ್ಕೆ ಜೋಕುಮಾರನ ಜನನ ಆಗುತ್ತದೆ ಎಂಬುದು ಭಕ್ತರ ನಂಬಿಕೆ. ಗ್ರಾಮೀಣ ಮತ್ತು ನಗರಗಳಲ್ಲಿ ಮಹಿಳೆಯರು ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಸುತ್ತುತ್ತಾರೆ. ಹೀಗೆ ಜೋಕುಮಾರ ಹುಣ್ಣಿಮೆ ಬರುವವರೆಗೆ 7 ದಿನಗಳ ಕಾಲ ಸಂಚರಿಸುತ್ತಾರೆ. ಅಲ್ಲದೆ, ಉತ್ತಮ ಮಳೆ, ಬೆಳೆ ಆಗಲಿ ಎಂದು ಇಲ್ಲಿನ ಜನರು ಜೋಕುಮಾರನಿಗೆ ಪೂಜಿಸುತ್ತಾರೆ.
ಜಾನಪದದ ಸೊಗಡು;ಹೊಸ ಬಿದಿರಿನ ಬುಟ್ಟಿಯಲ್ಲಿ ಮಣ್ಣಿನಿಂದಲೇ ಜೋಕುಮಾರನ ಮೂರ್ತಿ ಮಾಡಿ ಪ್ರತಿಷ್ಠಾಪಿಸುತ್ತಾರೆ. ಬೇವಿನ ಎಲೆಗಳಿಂದ ವಿವಿಧ ಹೂಗಳು, ಮೆಣಸಿನಕಾಯಿಂದಲೇ ಅಲಂಕಾರ ಮಾಡುತ್ತಾರೆ. ನಂತರ ಮಹಿಳೆಯರು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ಪ್ರಮುಖ ಗಲ್ಲಿಗಳಿಗೆ ಹೊತ್ತುಕೊಂಡು ಹೋಗುತ್ತಾರೆ. ಮನೆಯ ಕಟ್ಟೆಯ ಮೇಲಿಟ್ಟು ಜೋಕುಮಾರನ ಹಾಡುಗಳನ್ನು ಹಾಡುತ್ತಾರೆ. ಇಲ್ಲಿ ಜೋಕುಮಾರನ ಹಾಡುಗಳು ಜಾನಪದ ಶೈಲಿಯಲ್ಲಿವೆ. ಈ ಎಲ್ಲ ಹಾಡುಗಳನ್ನು ಓದಲು, ಬರೆಯಲು ಬಾರದ ಮಹಿಳೆಯರು ಹಾಡುತ್ತಾರೆ.