ಹಾವೇರಿ :ತಾಲೂಕಿನ ಗುತ್ತಲ ಗ್ರಾಮದಲ್ಲೊಂದು ಗಣಪತಿ ಮೂರ್ತಿ ತಯಾರಿಸುವ ವಿಶಿಷ್ಟ ಅವಿಭಕ್ತ ಕುಟುಂಬವಿದೆ. ನೆಗಳೂರುಮಠ ಹೆಸರಿನ ಈ ವಿಶಿಷ್ಠ ಕಲಾವಿದ ಕುಟುಂಬದಲ್ಲಿ ನಲವತ್ತಕ್ಕೂ ಅಧಿಕ ಸದಸ್ಯರಿದ್ದಾರೆ. ಇವರಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10ಕ್ಕೂ ಅಧಿಕ ಜನರು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಗಣೇಶನ ಹಬ್ಬ ಬಂದ್ರೆ ಸಾಕು ಸದಸ್ಯರೆಲ್ಲರೂ ಗುತ್ತಲದ ಮನೆಗೆ ಬಂದು ಸೇರುತ್ತಾರೆ.
ಕೆಲವರು ತಿಂಗಳ ಕಾಲ ಮೊದಲೇ ಮುಂದೆ ಬಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಗಣೇಶ ಮೂರ್ತಿಗಳು ತಯಾರಾದ ನಂತರ ಬಣ್ಣ ಹಚ್ಚಲು 40ಕ್ಕೂ ಅಧಿಕ ಸದಸ್ಯರು ಗುತ್ತಲಕ್ಕೆ ಬರುತ್ತಾರೆ. ತಮ್ಮ ಸರ್ಕಾರಿ ಕೆಲಸಕ್ಕೆ ವಾರದ ಕಾಲ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಬಳಿಯಲು ಧಾವಿಸುತ್ತಾರೆ.
ಇನ್ನೂ ಕೆಲವರು ದೂರದ ಬೆಂಗಳೂರು, ಮೈಸೂರು, ಮುಂಬೈಯಿಂದ ಖಾಸಗಿ ಕೆಲಸಕ್ಕೆ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಹಚ್ಚಲು ಬರುತ್ತಾರೆ. ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ನೆಗಳೂರುಮಠ ಮನೆ ಗಣೇಶನ ಮೂರ್ತಿ ತಯಾರಿಸುವ ಕಾರ್ಖಾನೆಯಂತೆ ಭಾಸವಾಗುತ್ತೆ. ಕೆಲವರು ಕೈಯಲ್ಲಿ ಕುಂಚ ಹಿಡಿದು ಬಣ್ಣ ಬಳಿಯುತ್ತಿದ್ದರೆ, ಇನ್ನೂ ಕೆಲವರು ಗಣೇಶ ಮೂರ್ತಿಗಳಿಗೆ ಅಂತಿಮ ಹಂತದ ಸ್ಪರ್ಶ ನೀಡುತ್ತಾರೆ.
ಶತಮಾನದಿಂದ ಈ ಕುಟುಂಬ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದೆ. ಸಂಪೂರ್ಣ ಮಣ್ಣಿನ ಮತ್ತು ಪರಿಸರ ಪ್ರೇಮಿ ಬಣ್ಣಗಳನ್ನು ಈ ಕುಟುಂಬ ಬಳಸುತ್ತದೆ. ಗುತ್ತಲ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಥಾಪಿಸುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಈ ಕುಟುಂಬದ ಸದಸ್ಯರೇ ಮಾಡುವುದು ವಿಶೇಷ. ಈ ಕುಟುಂಬದ ಸದಸ್ಯರು ಈ ರೀತಿ ಉನ್ನತ ಸ್ಥಾನ ಗಳಿಸಲು ಗಣೇಶ ಮೂರ್ತಿಗಳನ್ನು ಸೇವೆಯಂದು ಪರಿಗಣಿಸಿರುವುದೇ ಕಾರಣ ಎಂದು ಈ ಕುಟುಂಬದ ಸದಸ್ಯರು ಹೇಳುತ್ತಾರೆ.
ಭಕ್ತರು ನೀಡುವ ಹಣ ಪಡೆಯುವ ಕುಟುಂಬಸ್ಥರು:ಹೀಗಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲು ಈ ಕುಟುಂಬದ ಸದಸ್ಯರು ಯಾವುದೇ ಕೆಲಸದಲ್ಲಿದ್ದರೂ ಬಿಟ್ಟು ಗುತ್ತಲ ಗ್ರಾಮಕ್ಕೆ ಬರುತ್ತಾರೆ. ಈ ಮನೆಗೆ ಹೊಸದಾಗಿ ಬರುವ ಸೊಸೆಯಂದಿರು ಮತ್ತು ಅಳಿಯಂದಿರು ಸಹ ಗಣಪತಿ ಮೂರ್ತಿ ತಯಾರಿಸುತ್ತಾರೆ. ಗಣೇಶ ಮೂರ್ತಿಗೆ ಬಣ್ಣ ಬಳಿಯುತ್ತಾರೆ. ಈ ಕುಟುಂಬದ ಇನ್ನೊಂದು ವಿಶೇಷ ಅಂದರೆ ಇವರು ನೀಡುವ ಗಣೇಶ ಮೂರ್ತಿಗಳಿಗೆ ಯಾವುದೇ ದರ ನಿಗದಿ ಮಾಡುವುದಿಲ್ಲ. ಭಕ್ತರು ಎಷ್ಟು ಹಣ ನೀಡುತ್ತಾರೆಯೋ ಅಷ್ಟನ್ನೇ ಪಡೆಯುವ ಈ ಕುಟುಂಬ ಗಣೇಶ ಮೂರ್ತಿಯನ್ನ ಭಕ್ತರಿಗೆ ನೀಡುತ್ತಾರೆ.