ಹೊಸಪೇಟೆ:ಜೆನ್ನಿ ಮಿಲ್ಕ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮೇವು, ನೀರಿಲ್ಲದೇ ತಾಲೂಕಿನ ಮಲಪನಗುಡಿ ಬಳಿ ಬಂಧನಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಕತ್ತೆಗಳನ್ನು ಶುಕ್ರವಾರ ಹರಾಜಿನ ಮೂಲಕ ಬಿಡುಗಡೆ ಮಾಡಲಾಯಿತು.
ಜೆನ್ನಿ ಮಿಲ್ಕ್ ಕತ್ತೆಗಳ ಮಾರಾಟ ಪ್ರಕರಣದಲ್ಲಿ ಒಟ್ಟು 13 ಕೋಟಿ ರೂ.ಗೂ ಅಧಿಕ ವಂಚನೆ ಆಗಿದೆ ಎಂದು 319 ಜನ ನೊಂದವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಂಡಗಳನ್ನು ರಚಿಸಿ, ತನಿಖೆ ಕೈಗೊಂಡ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜೊತೆಗೆ, ಕಂಪನಿಗೆ ಸೇರಿದ 44 ಕತ್ತೆಗಳನ್ನು ಕೂಡ ವಶಕ್ಕೆ ಪಡೆಯಲಾಗಿತ್ತು. ಹೆಚ್ಚಿನ ತನಿಖೆಗೆ ಪ್ರಕರಣವನ್ನು ಕಲಬುರಗಿಯ ಸಿಐಡಿ ಡಿವೈಎಸ್ಪಿ ಅಸ್ಲಾಂ ಪಾಷಾ ಅವರಿಗೆ ವಹಿಸಲಾಗಿದೆ.
ಆದರೆ, ಈ ಅವಧಿಯಲ್ಲಿ ಕತ್ತೆಗಳು ಮೇವು ನೀರಿಲ್ಲದೇ ನರಕಯಾತನೆ ಅನುಭವಿಸಿದವು. ಇವುಗಳಲ್ಲಿ 2 ಕತ್ತೆಗಳು ನಿರ್ವಹಣೆಯಿಲ್ಲದೆ ಸತ್ತಿವೆ. ಇವುಗಳ ಯಾತನೆ ಮನಗಂಡ ಸಿಐಡಿ ತಂಡ ಕೆಲ ದಿನಗಳಿಂದ ದಿನಕ್ಕೆ ಅಂದಾಜು 5 ಸಾವಿರ ರೂ. ವೆಚ್ಚದಲ್ಲಿ ತರಕಾರಿ ಹಾಗೂ ಮೇವಿನ ವ್ಯವಸ್ಥೆ ಮಾಡಿತ್ತು. ನ್ಯಾಯಾಲಯದಲ್ಲಿ ಅನುಮತಿ ಪಡೆದು ಶುಕ್ರವಾರ ಹರಾಜು ಪ್ರಕ್ರಿಯೆ ನಡೆಸಿದ ಸಿಐಡಿ ತಂಡ ಕತ್ತೆಗಳನ್ನು ಬಂಧನದಿಂದ ಮುಕ್ತ ಮಾಡಿದೆ.
ಆಂಧ್ರ ಪ್ರದೇಶದ ಕರ್ನೂಲ್ ತಾಲೂಕಿನ ಗುಳ್ಳೆಂನ ಗಾದಿಲಿಂಗ, ರಾಯದುರ್ಗದ ಸಿ.ಸುರೇಶ್ ಹಾಗೂ ತುಮಕೂರಿನ ಪ್ರಹ್ಲಾದ್, ಮೂವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸವಾಲ್ 10 ಸಾವಿರ ರೂ. ಹೇಳಿದರು. ಆದರೆ ಜೆನ್ನಿ ಮಿಲ್ಕ್ ಕಂಪನಿಯಿಂದ ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಮರಿಗಳ ಜತೆ ಹಾಲು ಕೊಡುವ ಕತ್ತೆಗಳು ಹರಾಜಿನಲ್ಲಿ ಕಡಿಮೆ ಬೆಲೆಗೆ ಮಾರಾಟವಾದವು. ರಾಯದುರ್ಗದ ಸಿ.ಸುರೇಶ್ ಅವರು ಒಂದು ಕತ್ತೆಗೆ 6.5 ಸಾವಿರ ರೂ.ಗೆ ಅತಿ ಹೆಚ್ಚಿನ ಹರಾಜು ಕೂಗಿದರು. ಒಂದು ಮರಿ ಕತ್ತೆ ಸಾವಿರ ರೂ.ಗೆ ಮಾರಾಟ ಆಗಿದೆ. 42 ಕತ್ತೆಗಳು ಹಾಗೂ ಎರಡು ಮರಿಗಳಿದ್ದವು. ಒಟ್ಟು 2.75 ಲಕ್ಷ ರೂ.ಗೆ ಕತ್ತೆಗಳು ಹರಾಜಿನಲ್ಲಿ ಮಾರಾಟ ಆಗಿವೆ.