ಕರ್ನಾಟಕ

karnataka

ETV Bharat / state

ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ : ಹೆಚ್.ಡಿ. ಕುಮಾರಸ್ವಾಮಿ - JDS MEETING

ಮುಂದಿನ ಏಪ್ರಿಲ್ ಒಳಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್​. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jan 12, 2025, 7:10 PM IST

ಬೆಂಗಳೂರು:ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಂಡಿದೆ ಎಂದು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆ.ಪಿ. ಭವನದಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ. ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನ ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮುಂದಿನ ಏಪ್ರಿಲ್ ಒಳಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ. ನಾನು ಕೂಡ ಪಕ್ಷ ಸಂಘಟನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮೀಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಸಾರ್ವಜನಿಕ ಉದ್ಯಮಿಗಳು ಲಾಭದಾಯಕವಲ್ಲ ಎನ್ನುವ ಮಾತಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆ ಕಾರ್ಖಾನೆಗಳು ಲಾಭ ಮಾಡಬಲ್ಲವು ಎಂಬುದನ್ನು ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಒತ್ತಿ ಹೇಳಿದರು.

ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕಿಡಿ : ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಸಚಿವರೇ.. ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಜಮ್ಮು ಕಾಶ್ಮೀರ್​ ಸಿಎಂ ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲಾ ಎಲ್ಲಿದೆ ಕಾಂಗ್ರೆಸ್? ನಿಮ್ಮ ಪಕ್ಷದ ಒಳಗೆ ಏನಾಗುತ್ತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ನಿಮ್ಮ ಪಕ್ಷದ ತಟ್ಟೆಯಲ್ಲಿಯೇ ಹೆಗ್ಗಣ ಸತ್ತುಬಿದ್ದಿದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಜಾತಿಗಣತಿ, ಸಿಎಂ ವಿರುದ್ಧ HDK ಗರಂ :ಕಾಂತರಾಜ್ ವರದಿ ಸರ್ಕಾರದ ಕೈ ಸೇರಿ ಎಷ್ಟು ವರ್ಷವಾಯಿತು? ಜಾತಿಗಳ ಸಮಸ್ಯೆಗಳಿಗೆ ಏನು ಪರಿಹಾರ ಕೊಟ್ಟಿದ್ದಾರೆ ಇವರು. ಏಳು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇದ್ದಾರಲ್ಲವೇ? ಅಹಿಂದ ವರ್ಗಕ್ಕೆ ಅವರು ಏನು ಮಾಡಿದ್ದಾರೆ? ಕೇವಲ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವರು ಈ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅರೋಪಿಸಿದರು.

ರಾಹುಲ್ ಗಾಂಧಿ ಹೋದ ಕಡೆ, ಬಂದ ಕಡೆ ಜಾತಿಗಣತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವೇ ಜಾತಿ ಗಣತಿಗೆ ತೀರ್ಮಾನ ಮಾಡಿದೆ. ಹೀಗಿದ್ದ ಮೇಲೆ ರಾಜ್ಯ ಸರ್ಕಾರ ಕೇಂದ್ರದ ವರದಿ ಬರುವ ತನಕ ಕಾಯಲಿ. ರಾಜ್ಯದಲ್ಲಿ ಈಗಾಗಲೇ ಆಗಿರುವ ಜಾತಿಗಣತಿ ವರದಿ ದೋಷಪೂರಿತವಾಗಿದೆ. ಗಣತಿ ಆಗಿ ಹತ್ತು ವರ್ಷಗಳು ಮೀರಿದೆ. ರಾಜ್ಯದಲ್ಲಿ ಹಣಕ್ಕೆ ಬರವಿಲ್ಲ. ರಾಜ್ಯ ಸರ್ಕಾರವೇ ಹೊಸದಾಗಿ ಇನ್ನೊಂದು ಜಾತಿ ಜನಗಣತಿ ಮಾಡಲಿ. ಗಂಜಿ ಕೇಂದ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂತಿರುವ ಕೆಲವರು ಇರುತ್ತಾರಲ್ಲವೇ.. ಅವರನ್ನೇ ಸೇರಿಸಿ ಇನ್ನೊಂದು ಸಮಿತಿ ಮಾಡಿ, ಜಾತಿ ಗಣತಿ ಮಾಡಿಸಿ ಎಂದು ಸಿಎಂಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ಇದನ್ನೂ ಓದಿ:ಈ ಸರ್ಕಾರದ ರೀತಿ ನನ್ನ ಸಹಿ ಮಾರಾಟಕ್ಕಿಟ್ಟಿಲ್ಲ; ಎಚ್​ಡಿ ಕುಮಾರಸ್ವಾಮಿ

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಲಂಚದ ಪ್ರಮಾಣ ಶೇ. 60ಕ್ಕೆ ತಲುಪಿದೆ; ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details