ಕರ್ನಾಟಕ

karnataka

ETV Bharat / state

ಮಂಡ್ಯ ನಗರಸಭೆಯಲ್ಲಿ ಎನ್​ಡಿಎಗೆ ಅಧಿಕಾರ; ಕೈ ಆಪರೇಷನ್​ಗೆ ಹೆಚ್​ಡಿಕೆ ರಿವರ್ಸ್ ಆಪರೇಷನ್ - MANDYA MUNICIPAL CORPORATION - MANDYA MUNICIPAL CORPORATION

ಮಂಡ್ಯ ನಗರಸಭೆಯ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಆಪರೇಷನ್​​ಗೆ ಮುಂದಾಗಿದ್ದ ಕೈ ನಾಯಕರಿಗೆ ಹೆಚ್​ಡಿಕೆ ರಿವರ್ಸ್​ ಆಪರೇಷನ್​​ ಮಾಡಿದ್ದಾರೆ. ಈ ಮೂಲಕ ಮೈತ್ರಿ ಪಕ್ಷಕ್ಕೆ ನಗರಸಭೆ ಅಧಿಕಾರ ಕೊಡಿಸಿ ಮಂಡ್ಯ ಜೆಡಿಎಸ್​​ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

President Nagesh, Vice President Arun Kumar
ಅಧ್ಯಕ್ಷ ನಾಗೇಶ್​, ಉಪಾಧ್ಯಕ್ಷ ಅರುಣ್ ಕುಮಾರ್ (ETV Bharat)

By ETV Bharat Karnataka Team

Published : Aug 28, 2024, 8:17 PM IST

ಮಂಡ್ಯ ನಗರಸಭೆಯಲ್ಲಿ ಎನ್​ಡಿಎಗೆ ಅಧಿಕಾರ (ETV Bharat)

ಮಂಡ್ಯ :ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ನಗರ ಸಭೆಯ ಅಧಿಕಾರ ಗದ್ದುಗೆ ಕಡೆಗೂ ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷಗಳ ಪಾಲಾಗಿದೆ. ನಗರಸಭೆಯ ಅಧಿಕಾರ ಗಾದಿ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡಿದ್ದ ಕಾಂಗ್ರೆಸ್​ಗೆ ಹೆಚ್​ಡಿಕೆ ಎಂಟ್ರಿ ಸೋಲು ತರಿಸಿದೆ. ಆಪರೇಷನ್ ಮಾಡಲು ಹೋಗಿ ಹೆಚ್​ಡಿಕೆಯ ರಿವರ್ಸ್ ಆಪರೇಷನ್​ಗೆ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.

ಇಂದಿನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಚುನಾವಣೆ ಮತ್ತೊಮ್ಮೆ ಮಂಡ್ಯ ಜೆಡಿಎಸ್​ನ ಭದ್ರಕೋಟೆ ಎಂಬುದನ್ನ ಸಾಬೀತು ಪಡಿಸಿದೆ‌. 35 ನಗರಸಭೆ ಸದಸ್ಯರ ಬಲ ಹಾಗೂ 1 ಸ್ಥಳೀಯ ಶಾಸಕ, 1 ಸಂಸದರ ಮತ ಸೇರಿ‌ ಒಟ್ಟು 37 ಮತಗಳಿದ್ದವು. ನಗರಸಭೆಯ ಅಧಿಕಾರ ಹಿಡಿಯಲು 19 ಮತಗಳು ಬೇಕಿದ್ದವು. 35 ಸದಸ್ಯ ಬಲದಲ್ಲಿ 18 ಜೆಡಿಎಸ್, 2 ಬಿಜೆಪಿ, 10 ಕಾಂಗ್ರೆಸ್, 5 ಪಕ್ಷೇತರ ಸದಸ್ಯರಿದ್ದರು.

ಮೇಲ್ನೋಟಕ್ಕೆ ಅಧಿಕಾರಕ್ಕೆ ಜೆಡಿಎಸ್​ಗೆ ಸ್ಪಷ್ಟ ಬಹುಮತ ಇತ್ತಾದರೂ, ಕಾಂಗ್ರೆಸ್ ನಡೆಸಿದ ಆಪರೇಶನ್​ಗೆ ಜೆಡಿಎಸ್ ಮೂವರು ಸದಸ್ಯರು ಕೈ ತೆಕ್ಕೆಗೆ ಜಾರಿದ್ದರು‌. ಕೈಗೆ ಐವರು ಪಕ್ಷೇತರರು, ಮೂವರು ಜೆಡಿಎಸ್ ಸದಸ್ಯರು ಸೇರಿ 10 ಸದಸ್ಯರು ಹಾಗೂ 1 ಸ್ಥಳೀಯ ಕೈ ಶಾಸಕನ ಮತ ಸೇರಿ ಮ್ಯಾಜಿಕ್ ನಂ 19 ರೊಂದಿಗೆ ಅಧಿಕಾರ ಹಿಡಿಯಲು ಸಚಿವ ಚಲುವರಾಯಸ್ವಾಮಿ ಭಾರಿ ರಣತಂತ್ರ ರೂಪಿಸಿದ್ದರು.

ಕಾಂಗ್ರೆಸ್​ನ ಈ ರಣತಂತ್ರದಿಂದ ಜೆಡಿಎಸ್​ಗೆ ಆಘಾತವಾಗಿತ್ತು. ಶತಾಯಗತಾಯ ಮತ್ತೆ ನಗರಸಭೆ ಅಧಿಕಾರ ಹಿಡಿಯಲು ಪಕ್ಷದ ವರಿಷ್ಠ ಹೆಚ್​ಡಿಕೆ ನಗರಸಭೆ ಅಖಾಡಕ್ಕೆ ಎಂಟ್ರಿ ಕೊಡುವ ಮೂಲಕ ಕೈ ನಾಯಕರ ರಣತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದರು.

ನಗರಸಭೆಯ ಕೈ ಸದಸ್ಯರೊಬ್ಬರನ್ನು ರಿವರ್ಸ್ ಆಪರೇಷನ್ ಮಾಡಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾದ್ರು. ಅಲ್ಲದೆ ಇಂದಿನ ಚುನಾವಣೆಗೆ ಅವರನ್ನ ತಮ್ಮ ಕಾರಿನಲ್ಲೇ ಕರೆತಂದು ಪಕ್ಷದ ಪರವಾಗಿ ಮತ ಹಾಕಿಸುವ ಮೂಲಕ 1 ಮತದ ಅಂತರದಿಂದ ಮೈತ್ರಿ ಪಕ್ಷಕ್ಕೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾದ್ರು.

ಅಧ್ಯಕ್ಷರಾಗಿ ನಾಗೇಶ್​, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ: 15 ಜೆಡಿಎಸ್, 2 ಬಿಜೆಪಿ, 1 ಕಾಂಗ್ರೆಸ್ ಹಾಗೂ 1 ಸಂಸದರ ಮತ ಸೇರಿ 19 ಮತಗಳೊಂದಿಗೆ ನಗರಸಭೆಯಲ್ಲಿ ಮೈತ್ರಿ ಪಕ್ಷಕ್ಕೆ ಅಧಿಕಾರ ಕೊಡಿಸುವಲ್ಲಿ ಮೇಲುಗೈ ಸಾಧಿಸಿದ್ರು. ಅಧ್ಯಕ್ಷರಾಗಿ ಜೆಡಿಎಸ್​ನ ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ತಲಾ 19 ಮತಗಳನ್ನು ಪಡೆದು ಆಯ್ಕೆಯಾದ್ರು.

ಮತದಾನಕ್ಕೆಂದು ಇಂದು ನಗರಸಭೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪ್ರತ್ಯೇಕ ವಾಹನದಲ್ಲಿ ಬಂದ್ರು. ಮೊದಲು ಕಾಂಗ್ರೆಸ್​ನವರು ತಮ್ಮ 10 ಜನ ಸದಸ್ಯರು, ಮೂವರು ಜೆಡಿಎಸ್ ಹಾಗೂ ಐವರು ಪಕ್ಷೇತರರ ಜೊತೆ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಬಂದ್ರು. ಮತದಾನಕ್ಕೆ ಸಂಸದ ಕುಮಾರಸ್ವಾಮಿ ಕಾರು ನಗರಸಭೆಗೆ ಎಂಟ್ರಿ ಆಗುತ್ತಿದ್ದಂತೆ ಅವರ ಕಾರಿನ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರಿದ್ದ ವಾಹನ ಬಂತು. ಈ ವೇಳೆ ಹೈಡ್ರಾಮವೇ ನಡೆದು ಹೋಯ್ತು.

ಜೆಡಿಎಸ್ ಸದಸ್ಯರು‌ ಕಾಂಗ್ರೆಸ್​ನ ಓರ್ವ ಸದಸ್ಯರನ್ನು ಹೈಜಾಕ್ ಮಾಡಿ ಕರೆ ತಂದಿರುವುದಾಗಿ ಆರೋಪಿಸಿ ಜೆಡಿಎಸ್ ಸದಸ್ಯರಿದ್ದ ವಾಹನವನ್ನ ಕೈ ಕಾರ್ಯಕರ್ತರು ಒಳಗೆ ಬಿಡದೆ ಗೇಟ್​ನ ಮುಂಭಾಗ ವಾಹನ ಸುತ್ತುವರೆದು, ಗದ್ದಲ ಆರಂಭಿಸಿದ್ರು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು. ಕಡೆಗೆ ಹೆಚ್​ಡಿಕೆ ಬಂದು ಪೊಲೀಸರ ನೆರವಿನೊಂದಿಗೆ ಜೆಡಿಎಸ್ ಸದಸ್ಯರಿದ್ದ ವಾಹನ ಒಳಗೆ ಕರೆತಂದ್ರು. ಅಲ್ಲದೆ ತಾವಿದ್ದ ಕಾರಿನಲ್ಲಿ ಕಾಂಗ್ರೆಸ್​ ಸದಸ್ಯನನ್ನೇ ಒಳಗೆ ಕರೆತಂದು ಕೈ ಪಡೆಗೆ ಟಕ್ಕರ್ ಕೊಟ್ರು.

ಮತದಾನದಲ್ಲಿ ಕೈಗೆ ಸೋಲಾಗುತ್ತಿದ್ದಂತೆ ಹೊರಬಂದ ಶಾಸಕ ರವಿ ಗಣಿಗ, ಸಂಸದ ಹೆಚ್​​ಡಿಕೆ ವಿರುದ್ಧ ಕಿಡಿಕಾರಿ, ಅಧಿಕಾರ ದುರ್ಬಳಕೆ ಮಾಡಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದು ಆರೋಪಿಸಿದ್ರೆ, ಇದಕ್ಕೆ ಕೇಂದ್ರ ಸಚಿವ ಹೆಚ್​ಡಿಕೆ
ಶಾಸಕ ಗಣಿಗ ರವಿಕುಮಾರ್​ ಅವರು ಯಾರ್ಯಾರಿಗೆ ಯಾವ್ಯಾವ ರೀತಿಯ ಆಮಿಷಗಳನ್ನ ಒಡ್ಡಿದ್ರು, ಸಭಾಂಗಣದಲ್ಲಿಯೂ ಸಹ ಕಣ್​ ಸನ್ನೆ, ಕೈ ಸನ್ನೆ ತೋರಿಸಿ ಹಣಕಾಸು ಲೆಕ್ಕಾಚಾರ ತೋರಿಸುತ್ತಿದ್ರಿ. ಏನ್ ಸನ್ನೆ ಅದು? ಎಂದು ತಿರುಗೇಟು ನೀಡಿದ್ರು.

ಮಂಡ್ಯ ಜೆಡಿಎಸ್​ನ ಭದ್ರಕೋಟೆ ಎಂಬುದನ್ನ ಸಾಬೀತುಪಡಿಸಿದ ಹೆಚ್​ಡಿಕೆ : ನಗರಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಗೆಲುವು ಆಗುತ್ತಿದ್ದಂತೆ ನಗರಸಭೆಯ ಆವರಣದ ಮುಂಭಾಗ ಜಮಾಯಿಸಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ತಮ್ಮ ನಾಯಕರಿಗೆ ಜೈಕಾರ ಕೂಗಿ ಸಂಭ್ರಮಿಸಿದ್ರು. ಆಪರೇಷನ್ ಮೂಲಕ ಅಧಿಕಾರ ಗದ್ದುಗೆ ಹಿಡಿಯಲು ಹೊರಟ್ಟಿದ್ದ ಕೈ ನಾಯಕರಿಗೆ ಹೆಚ್​ಡಿಕೆ ರಿವರ್ಸ್ ಆಪರೇಶನ್ ಮೂಲಕ ಟಕ್ಕರ್ ಕೊಟ್ಟು, ಕೈ ಪಡೆಗೆ ಮುಖಭಂಗ ಮಾಡುವ ಮೂಲಕ ಮಂಡ್ಯ ಜೆಡಿಎಸ್​ನ ಭದ್ರಕೋಟೆ ಎಂಬುದನ್ನ ಸಾಬೀತುಪಡಿಸಿದ್ರು.

ಇದನ್ನೂ ಓದಿ :ಗಣಿ ಗುತ್ತಿಗೆ ನೀಡಲು ಹೆಚ್​​ಡಿಕೆನೇ ಸಹಿ ಹಾಕಿದ್ದಾರೆ, ಆ.31ಕ್ಕೆ ಪ್ರತಿಭಟನೆ: ಡಿಸಿಎಂ ಡಿ.ಕೆ.ಶಿವಕುಮಾರ್ - HDK Sign Forgery Issue

ABOUT THE AUTHOR

...view details