ಕರ್ನಾಟಕ

karnataka

ETV Bharat / state

ಪರಿಷತ್ ಅಭ್ಯರ್ಥಿ ಆಯ್ಕೆಗೆ ಭಾನುವಾರ ಜೆಡಿಎಸ್ ಸಭೆ: ನಾಲ್ವರು ನಾಯಕರಿಂದ ಪ್ರಬಲ ಲಾಬಿ - Council Election - COUNCIL ELECTION

ಜೂನ್​​​ 13ರಂದು ವಿಧಾನ ಪರಿಷತ್​ಗೆ​ ಚುನಾವಣೆ ನಡೆಯಲಿದ್ದು, ಜೆಡಿಎಸ್​ ಪಕ್ಷದಿಂದ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ.

ಜೆಡಿಎಸ್ ಸಭೆ
ಜೆಡಿಎಸ್ (ETV Bharat)

By ETV Bharat Karnataka Team

Published : May 31, 2024, 10:17 AM IST

ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ಜೂನ್ 2ರಂದು ನಡೆಯಲಿರುವ ಜೆಡಿಎಸ್​ ನಾಯಕರ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಈಗಾಗಲೇ ಎರಡು ಹಂತದ ಸಭೆ ನಡೆದಿದ್ದು, ಭಾನುವಾರದ ಸಭೆಯಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸಿ ಅಂದೇ ಬಿ ಫಾರಂ ವಿತರಿಸಲಾಗುತ್ತದೆ.

ಜೂನ್​​​ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್​ನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 3 ಕಡೆಯ ದಿನ. ವಿಧಾನಸಭೆಯಲ್ಲಿ ಪಕ್ಷಗಳು ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಜೆಡಿಎಸ್​ಗೆ ಕೇವಲ 1 ಸ್ಥಾನ ಮಾತ್ರ ಲಭಿಸಲಿದ್ದು, ಒಂದು ಸ್ಥಾನಕ್ಕೆ ನಾಲ್ವರು ನಾಯಕರು ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಳಂಬವಾಗುತ್ತಿದೆ.

ಸದ್ಯ ಜೆಡಿಎಸ್​ನಿಂದಲೇ ಆಯ್ಕೆಯಾಗಿ ಅವಧಿ ಮುಗಿಸಿರುವ ಬಿ.ಎಂ.ಫಾರೂಕ್​​ ಮತ್ತೊಂದು ಅವಧಿಗೆ ಅವಕಾಶ ಕೋರಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿ.ಎಂ.ಫಾರೂಕ್ ಅವರ ಪಕ್ಷ ನಿಷ್ಠೆಯ ಬಗ್ಗೆ ಪಕ್ಷದಲ್ಲಿ ಯಾರಿಗೂ ಯಾವುದೇ ಪ್ರಶ್ನೆ ಇಲ್ಲ. ಆದರೆ ಪಕ್ಷಕ್ಕೆ ಅವರಿಂದ ಅಷ್ಟಾಗಿ ಯಾವುದೇ ಲಾಭ ಇಲ್ಲ, ಸಂಘಟನಾತ್ಮಕವಾಗಿ ಲಾಭದ ನಿರೀಕ್ಷೆಯಲ್ಲಿರುವ ಜೆಡಿಎಸ್ ನಾಯಕರು ಫಾರೂಕ್ ಅವರಿಗೆ ಮತ್ತೊಂದು ಅವಕಾಶ ಕೊಡುವುದು ಕಡಿಮೆ ಎನ್ನಲಾಗುತ್ತಿದೆ.

ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಪರಿಷತ್ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ. ಅವರೂ ಕೂಡ ದೇವೇಗೌಡರ ಮೂಲಕವೇ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಯಶವಂತಪುರ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದ ಜವರಾಯಿಗೌಡ ಸಂಘಟನಾತ್ಮಕವಾಗಿ ಪಕ್ಷಕ್ಕೆ ಹೆಚ್ಚಿನ ಬಲ ತುಂಬಬಲ್ಲವರಾಗಿರುವ ಹಿನ್ನೆಲೆಯಲ್ಲಿ ಅವರ ಕಡೆಗಣನೆ ದಳಪತಿಗಳಿಗೆ ಅಷ್ಟು ಸುಲಭವಿಲ್ಲ. ಇದರ ಜೊತೆಗೆ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಕೂಡ ಟಿಕೆಟ್ ಪ್ರಯತ್ನದಲ್ಲಿದ್ದಾರೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಈ ಬಾರಿ ಟಿಕೆಟ್ ಆಯ್ಕೆ ವಿಚಾರದಲ್ಲಿ ಅಷ್ಟಾಗಿ ಉತ್ಸುಕತೆ ತೋರಿಲ್ಲ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬೇಸರದಲ್ಲಿರುವ ಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಹೆಗಲಿಗೆ ಬಿಟ್ಟಿದ್ದಾರೆ. ಹಾಗಾಗಿ ಟಿಕೆಟ್ ಆಯ್ಕೆ ಕುರಿತು ಎರಡು ಸುತ್ತಿನ ಸಭೆ ನಡೆಸಿರುವ ನಾಯಕರು ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಕುರಿತು ನಿರ್ಧರಿಸಲು ಭಾನುವಾರ ಸಭೆ ಕರೆದಿದ್ದಾರೆ. ಜೆಪಿ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖ ನಾಯಕರ ಅಭಿಪ್ರಾಯ ಪಡೆದು ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ನಿರ್ಧಾರವನ್ನು ಪ್ರಕಟಿಸಲಿದ್ದು, ಅಂದೇ ಬಿ ಫಾರಂ ಕೂಡ ನೀಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಹೆಚ್.ಡಿ.ಕುಮಾರಸ್ವಾಮಿಗೆ ಜವರಾಯಿಗೌಡರ ಮೇಲೆ ಒಲವಿದ್ದು, ಒಳ್ಳೆಯ ಸಂಘಟಕ ಹಾಗು ಪಕ್ಷನಿಷ್ಠೆ ಕಾರಣಕ್ಕೆ ಅವರಿಗೆ ಅವಕಾಶ ನೀಡಬೇಕು. ಮೂರು ಬಾರಿ ಸೋತರೂ ಅವರು ನಿರಾಶರಾಗದೇ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ನೀಡಿದರೆ ಒಳಿತು ಎನ್ನುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಎಲ್ಲವೂ ಭಾನುವಾರದ ಸಭೆಯಲ್ಲಿ ಅಂತಿಮಗೊಳ್ಳಲಿದೆ.

ಇದನ್ನೂ ಓದಿ:ನನಗೂ ಕೆಪಿಸಿಸಿ ಅಧ್ಯಕ್ಷನಾಗಬೇಕೆಂಬ ಆಸೆ ಇದೆ: ಸಚಿವ ಹೆಚ್.ಸಿ.ಮಹದೇವಪ್ಪ - H C Mahadevappa

ABOUT THE AUTHOR

...view details