ಬೆಂಗಳೂರು:ರಾಜ್ಯಾದ್ಯಂತ ನಮ್ಮ ಪಕ್ಷದಿಂದ ಸದಸ್ಯತ್ವ ನೋಂದಣಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಕೋರ್ ಕಮಿಟಿ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜುಲೈನಲ್ಲಿ ಚುನಾವಣೆಗಳು ಬರುತ್ತವೆ. ಪ್ರತಿಯೊಂದು ಜಿಲ್ಲಾ ಹಾಗೂ ತಾಲೂಕು ಘಟಕಗಳು ಕೂಡ ಸದಸ್ಯತ್ವ ನೋಂದಣಿ ಮಾಡಲು ಪ್ರಾರಂಭ ಮಾಡಬೇಕು ಎಂದು ಕರೆ ನೀಡಿದರು.
ಮುಂದುವರೆದು, "ಈಗಾಗಲೇ ಲೋಕಸಭಾ ಚುನಾವಣೆಗೆ ಮತದಾನ ನಡೆದಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಬೆಂಬಲ ನೀಡಿದ್ದಾರೆ. ಎಷ್ಟೇ ಹಣಕಾಸಿನ ತೊಂದರೆ ಇದ್ದರೂ ಕೆಲಸ ಮಾಡಿದ್ದಾರೆ. ಅದೇ ರೀತಿ ಬಿಜೆಪಿ ಪಕ್ಷದ ನಾಯಕರು ಸಹ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಒಬ್ಬರು, ಇಬ್ಬರು ನಾಯಕರನ್ನು ಬಿಟ್ಟರೆ ಪಕ್ಷದ ಎಲ್ಲಾ ನಾಯಕರು ಕೆಲಸ ಮಾಡಿದ್ದಾರೆ. ಬಿಜೆಪಿಯ 25 ಹಾಗೂ ಜೆಡಿಎಸ್ನ 3 ಅಭ್ಯರ್ಥಿಗಳ ಪರ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಸಂತೋಷ ಆಗಿದೆ"ಎಂದು ಜಿ.ಟಿ.ದೇವೇಗೌಡ ಹೇಳಿದರು.