ಕರ್ನಾಟಕ

karnataka

ETV Bharat / state

ಷಡ್ಯಂತ್ರ ಮಾಡಿ ಹೆಚ್ ಡಿ ರೇವಣ್ಣರನ್ನು ಜೈಲಿಗೆ ಕಳಿಸಿದ್ದಾರೆ : ಜಿ ಟಿ ದೇವೇಗೌಡ - G T Deve Gowda - G T DEVE GOWDA

ಹೆಚ್. ಡಿ ರೇವಣ್ಣ ಬಂಧನದ ಕುರಿತು ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ ಅವರು ಮಾತನಾಡಿದರು.

G  T Deve-gowda
ಜಿ ಟಿ ದೇವೇಗೌಡ (ETV Bharat)

By ETV Bharat Karnataka Team

Published : May 9, 2024, 3:09 PM IST

ಬೆಂಗಳೂರು : ಷಡ್ಯಂತ್ರ ಮಾಡಿ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರನ್ನು ಜೈಲಿಗೆ ಕಳಿಸಿದ್ದಾರೆ. ಎಸ್ಐಟಿ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡಲು ತೀರ್ಮಾನಿಸಿದ್ದೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ ತಿಳಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವದಲ್ಲಿ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಕೋರ್ ಕಮಿಟಿ ಸಭೆ ಕರೆದಿದ್ದೇವೆ. ಹಾಲಿ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಪ್ರಜ್ವಲ್ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ಎಸ್ಐಟಿ ತನಿಖೆಗೆ ಕುಮಾರಸ್ವಾಮಿ ಸ್ವಾಗತ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಅಂತ ಹೇಳಿದ್ದೇವೆ. ಈಗಾಗಲೇ ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೇವೆ ಎಂದರು.

ಕಿಡ್ನಾಪ್ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಆಗುತ್ತಿದೆ. ಕಾರ್ತಿಕ್ ಪೆನ್​ಡ್ರೈವ್ ಕೊಟ್ಟಿದ್ದಾರೆಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ. ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಡಿಸಿಎಂ ಡಿ. ಕೆ ಶಿವಕುಮಾರ್ ಸಹ ದೇವರಾಜೇಗೌಡರ ಜೊತೆ ಮಾತಾಡಿರುವುದು ವಿಡಿಯೋ ಇದೆ. ದೇವರಾಜೇಗೌಡ ಮೂಲಕ ಡಿ. ಕೆ ಶಿವಕುಮಾರ್ ಮಾಡಿದ್ದಾರೆ. ಎಸ್ಐಟಿ ತನಿಖೆ ಬಗ್ಗೆ ಪತ್ರಿದಿನ ಆದೇಶ ನೀಡುತ್ತಿದ್ದಾರೆ. ಆ ಆದೇಶದಂತೆ ಎಸ್ಐಟಿ ತನಿಖೆ ಮಾಡ್ತಾ ಇದೆ. ಅದಕ್ಕೆ ಸಿಬಿಐ ತನಿಖೆಗೆ ನಾವು ಆಗ್ರಹಿಸುತ್ತೇವೆ‌ ಎಂದರು.

ಪೆನ್ ಡ್ರೈವ್ ಮಾಡಿ ಹಂಚಿದ್ದೀರಾ?. ಪೆನ್ ಡ್ರೈವ್ ಹಂಚಿ‌ ಪ್ರಧಾನಿ ಮೋದಿ ಹೆಸರು ಹೇಳ್ತೀರಾ?. ನಿಮ್ಮ ಜೊತೆ ಎಷ್ಟು ಎಂಎಲ್ಎಗಳು ಇದ್ದಾರೆ. ನಾವು ಪ್ರಜ್ವಲ್ ರೇವಣ್ಣ ಪರ ಹೋರಾಟ ಮಾಡಿಲ್ಲ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಪೆನ್​ ಡ್ರೈವ್​ ಹಂಚಿರುವ ಆರೋಪಿ ಕಾರ್ತಿಕ್​ನನ್ನು ಮುಚ್ಚಿಡುವ ಕೆಲಸ ಮಾಡಿದ್ದೀವಾ? ಎಂದು ಜಿಟಿಡಿ ವಾಗ್ದಾಳಿ ನಡೆಸಿದರು.

ಪ್ರಜ್ವಲ್ ರೇವಣ್ಣ ಬರುತ್ತಾರೆ. ಪ್ರಜ್ವಲ್ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಕೇಂದ್ರ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಅದರಂತೆ 196 ದೇಶಗಳಲ್ಲಿ ತಲಾಶ್ ಮಾಡಲಿದ್ದಾರೆ. ನೀವೇ ಎಲ್ಲಾ ಮಾಡಿ ಮೋದಿ ವಿರುದ್ಧ ಆರೋಪ ಮಾಡ್ತಿದ್ದೀರಾ?. ಮೋದಿಗೂ, ಇದಕ್ಕೂ ಸಂಬಂಧ ಏನು?. ನಿಮ್ಮಲ್ಲೇ ಸಿಡಿ ಮಾಡಿ, ಹೊರಗೆ ತಂದವರು ನಿಮ್ಮ ಜೊತೆಯಲ್ಲೇ ಇದ್ದಾರೆ. ಗೆದ್ದು ಬಂದು ನಿಮ್ಮ ಜೊತೆಯಲ್ಲೇ ಕುಳಿತಿದ್ದಾರೆ. ನೀವೇ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೀರಾ?. ನಾವ್ಯಾರು ಆ ರೀತಿ ಟಿಕೆಟ್ ಕೊಟ್ಟಿಲ್ಲ ಎಂದು ಡಿಕೆಶಿ ವಿರುದ್ಧ ಅವರು ಕಿಡಿಕಾರಿದರು.

ಎಲ್. ಆರ್ ಶಿವರಾಮೇಗೌಡ ನೇರವಾಗಿ ಹೇಳಿದ್ದು ಆಡಿಯೋ ಇದೆ. ಶ್ರೇಯಸ್ ಪಟೇಲ್ ಪಕ್ಕದಲ್ಲಿ ಕೂತು ಕೆಲಸ ಮಾಡಿಲ್ಲವಾ?. ಮೋದಿ ಅವರು ಪ್ರಧಾನಿ ಆಗಿ,‌ ಅಮಿತ್ ಶಾ ಗೃಹ ಸಚಿವರಾಗಿ ದೇಶದಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಇವರಿಂದ ಅವರು ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಜಿ ಟಿ ದೇವೇಗೌಡ ಹೇಳಿದ್ರು.

ನಾವು ಮಾತ್ರ ಬಟ್ಟೆ ಹಾಕಿದ್ದೇವೆ. ನೀವು ಬಟ್ಟೆ ಬಿಚ್ಚಿದ್ದೀರಿ ಅಂತ ಊರಿಗೆಲ್ಲಾ ತೋರಿಸಿದ್ದು ಸಾಕು. ನಮ್ಮ ಸರ್ಕಾರ ಆಡಳಿತದಲ್ಲಿ ಇಲ್ಲ. ಅಧಿಕಾರದಲ್ಲಿ ಇರೋದು ನೀವು. ಮೊದಲು ಮಹಿಳೆಯರ ಗೌರವ ಕಾಪಾಡುವ ಕೆಲಸ ಮಾಡಿ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಮೋದಿ, ಅಮಿತ್ ಶಾ ಅವರು ಮೈತ್ರಿ ಪಕ್ಷಗಳನ್ನು ಕೈಬಿಡುವುದಿಲ್ಲ. ಜೆಡಿಎಸ್ ಬಿಜೆಪಿ ಮೈತ್ರಿಗೆ ಯಾವುದೇ ಧಕ್ಕೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಸಭೆ :ಇದೇ ವೇಳೆ ಜಿ. ಟಿ ದೇವೇಗೌಡ ಹಾಗೂ ಹೆಚ್. ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಶಾಸಕರಾದ ಕೆ. ಅನ್ನದಾನಿ, ಸಿ. ಎಸ್ ಪುಟ್ಟರಾಜು, ಲೀಲಾದೇವಿ ಆರ್. ಪ್ರಸಾದ್, ಬಂಡಪ್ಪ ಕಾಶಂಪೂರ್, ಡಿ ಸಿ ತಮ್ಮಣ್ಣ, ಶಾಸಕರಾದ ಸಿ. ಹೆಚ್ ಬಾಲಕೃಷ್ಣ, ಟಿ. ಎ ಶರವಣ, ತಿಪ್ಪೇಸ್ವಾಮಿ ಮತ್ತಿತರ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ :ಎಸ್ಐಟಿ ತನಿಖೆ ಸಮರ್ಥವಾಗಿ ನಡೆಯುತ್ತಿದೆ, ಹೆಚ್​ಡಿಕೆ ಹೇಳಿದ್ದಕ್ಕೆಲ್ಲ ಉತ್ತರಿಸಲ್ಲ: ಸಚಿವ ಪರಮೇಶ್ವರ್ - SIT Investigation

ABOUT THE AUTHOR

...view details