ಕಾರವಾರ:ಸಮಬಲದ ಸ್ಥಾನಗಳಿಂದಾಗಿ ಬಿಜೆಪಿ-ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದ್ದ ಕಾರವಾರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕೊನೆಗೂ ಮೈತ್ರಿ ಪಕ್ಷ ಜಯ ಗಳಿಸಿದೆ. ಬಿಜೆಪಿಯ ರವಿರಾಜ್ ಅಂಕೋಲೆಕರ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರೀತಿ ಮಧುಕರ್ ಜೋಶಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾರವಾರ ನಗರಸಭೆಯ ಸ್ಥಾನಕ್ಕಾಗಿ ಎರಡು ಪಕ್ಷದವರು ತೀವ್ರ ಪೈಟೋಟಿ ನಡೆಸಿದ್ದರು. ಅದರಂತೆ ಬುಧವಾರ ಚುನಾವಣಾ ಪ್ರಕ್ರಿಯೆ ನಡೆದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ನೂತನ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅವರು ಒಟ್ಟು 19 ಮತಗಳನ್ನು ಪಡೆದರು. ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಪ್ರಕಾಶ ಪಿ. ನಾಯ್ಕ 14 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಪ್ರೀತಿ ಜೋಶಿ ಕೂಡ 19 ಮತಗಳನ್ನು ಪಡೆದು ಕಾಂಗ್ರೆಸ್‌ನ ಸ್ನೇಹಲ್ ಹರಿಕಂತ್ರ ವಿರುದ್ಧ ಜಯ ಗಳಿಸಿದರು. ಬಿಜೆಪಿಯ ಗೆಲುವಿಗಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಎಲ್ಸಿ ಗಣಪತಿ ಉಳ್ವೇಕರ್ ಸೇರಿದಂತೆ ಒಟ್ಟು ಮೂವರು ಜೆಡಿಎಸ್, ಪಕ್ಷೇತರ ಮೂವರು ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿದ್ದ ಪ್ರಕಾಶ ಪಿ. ನಾಯ್ಕ ಅವರು ಉಪಾಧ್ಯಕ್ಷರಾಗಿದ್ದರು. ಆದರೆ ಈ ಸಲ ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ರವಿರಾಜ್ ಅಂಕೋಲೇಕರ್ ಅವರಿಗೆ ಅಧ್ಯಕ್ಷ ಸ್ಥಾನ ಬಿಜೆಪಿಯಿಂದ ನಿಗದಿಯಾಗಿದ್ದರಿಂದ ಪ್ರಕಾಶ ಪಿ. ನಾಯ್ಕ ಈ ಸಲ ಕಾಂಗ್ರೆಸ್ ಬೆಂಬಲಿಸಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬದಿಗಿಟ್ಟು ಪ್ರಕಾಶ ಪಿ. ನಾಯ್ಕ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು.
ಪೊಲೀಸರೊಂದಿಗೆ ಮಾತಿನ ಚಕಮಕಿ:ಮತ ಚಲಾಯಿಸಲು ಶಿರಸಿಯಿಂದ ಕಾರವಾರ ನಗರಸಭೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿದ್ದರು. ಪೊಲೀಸರು, ನಗರಸಭೆ ಸಿಬ್ಬಂದಿಗಳು ಮುಖ್ಯ ಗೇಟ್ ತೆರೆಯದೇ ಪಕ್ಕದಲ್ಲಿದ್ದ ಚಿಕ್ಕ ಗೇಟಿನಿಂದ ಸಂಸದರು ಸೇರಿದಂತೆ ಎಲ್ಲರನ್ನು ಒಳಗಡೆ ಬಿಡಲಾಗಿತ್ತು. ಬಳಿಕ ಶಾಸಕ ಸತೀಶ್ ಸೈಲ್ ಅವರು ಮತ ಚಲಾಯಿಸಲು ಆಗಮಿಸಿದ್ದ ವೇಳೆ ಸಣ್ಣ ಗೇಟ್ ಮೂಲಕ ತೆರಳಲು ಆಗುವುದಿಲ್ಲ ಎಂದರು. ಬಳಿಕ ಕೆಲ ಹೊತ್ತು ಪೊಲೀಸರೊಂದಿಗೆ ವಾಗ್ವಾದ ನಡೆದು ಕೊನೆಗೆ ನಗರಸಭೆ ಮುಖ್ಯ ಗೇಟ್ ತೆರೆದು ಒಳಗೆ ಪ್ರವೇಶ ಮಾಡಲು ಅವಕಾಶ ನೀಡಿದ್ದರು.