ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಹುಬ್ಬಳ್ಳಿ: ವಿದೇಶಾಂಗ ಸಚಿವ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಚ್ಚಳವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಇಬ್ಬರೂ ಪ್ರಭಾವಿ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಗ್ಯಾರೆಂಟಿ ಆಗಿದೆ. ಆದರೆ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದರು.
ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಅಥವಾ ಬೇರೆ ರಾಜ್ಯದ ಕ್ಷೇತ್ರಗಳಿಂದಲೂ ಸ್ಪರ್ಧಿಸಬಹುದು. ಕ್ಷೇತ್ರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಜೋಶಿ ತಿಳಿಸಿದರು.
ಸುಮಲತಾ ಟಿಕೆಟ್ ವಿವಾದ ಬಗೆಹರಿಯಲಿದೆ: ಮಂಡ್ಯ ಲೋಕಸಭೆ ಟಿಕೆಟ್ ಹಂಚಿಕೆ ವಿವಾದ ಪರಿಹಾರ ಕಾಣಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಿಂದ ಏನೂ ಸಮಸ್ಯೆಯಿಲ್ಲ. ಅಂತೆಯೇ ಜೆಡಿಎಸ್ನಿಂದಲೂ ಅಂಥ ಸಮಸ್ಯೆಯಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.
ಒಂದು ಮನೆಯಲ್ಲೇ ಕೆಲವೊಮ್ಮೆ ಹೊಂದಾಣಿಕೆ ಕಷ್ಟವಾಗಿರುತ್ತದೆ. ಹಾಗಿರುವಾಗ ದೊಡ್ಡ ಪಕ್ಷ, ಲಕ್ಷಾಂತರ ಮುಖಂಡರು, ಕಾರ್ಯಕರ್ತರು ಇರುವಾಗ ಸಮಸ್ಯೆ ಸಹಜ. ಆದರೆ, ಅದೆಲ್ಲ ಬಗೆಹರಿಯುತ್ತದೆ. ಮಂಡ್ಯ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಬ್ಬರ ಸಹಕಾರದಿಂದ ಟಿಕೆಟ್ ಹಂಚಿಕೆ ವಿವಾದ ಅಂತ್ಯ ಕಾಣಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಡಿಸಿದರು.
ಓದಿ:ಹಳಿ ಮೇಲೆ ಲಾರಿ ಪಲ್ಟಿ: ರೈಲಿನತ್ತ ಟಾರ್ಚ್ ಲೈಟ್ ತೋರಿಸಿ, ಅವಘಡ ತಪ್ಪಿಸಿದ ವೃದ್ಧ ದಂಪತಿ