ಬೆಂಗಳೂರು/ನವದೆಹಲಿ : ಜಾತಿಗಣತಿ ವರದಿಯಲ್ಲಿರುವ ಅಂಕಿ - ಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನವದೆಹಲಿಯಲ್ಲಿ ಇಂದು ಉದ್ಘಾಟನೆಗೆ ಸಿದ್ದವಾಗಿರುವ ಕನ್ನಡ ಭವನದ ನೂತನ ಕಟ್ಟಡವನ್ನು ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ಉತ್ತಮವಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ ಕಟ್ಟಡ, ಇಂದು ಸುಸಜ್ಜಿತ ಕಟ್ಟಡವಾಗಿ ಉದ್ಘಾಟನೆಗೊಂಡಿದೆ ಎಂದು ಹೇಳಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ: ಆರ್ಎಸ್ಎಸ್ ಪ್ರಮುಖ ಮೋಹನ್ ಭಾಗವತ್ ಅವರು ಆಯೋಧ್ಯೆಯ ರಾಮಮಂದಿರ ಪ್ರಾರಂಭವಾದ ದಿನ ದೇಶಕ್ಕೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಆರ್ಎಸ್ಎಸ್ ಹಾಗೂ ಬಿಜೆಪಿಯವರು ಬ್ರಿಟೀಷರೊಂದಿಗೆ ಶಾಮೀಲಾಗಿದ್ದರು. ಮೋಹನ್ ಭಾಗವತರ ಹೇಳಿಕೆ ಸರಿಯಾದುದಲ್ಲ ಎಂದರು.