ಕಲಬುರಗಿ:''ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಡ್ಡ ಮತದಾನದ ಭೀತಿ ಇದೆ ಅನ್ನೋದು ಸುಳ್ಳು, ಅಡ್ಡ ಮತದಾನ ಆಗಲ್ಲ. ಎಲ್ಲವೂ ಯೋಜನಾ ಬದ್ಧ ಮತದಾನವೇ ಆಗುತ್ತೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೋಮವಾರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ನಿಧನದ ಹಿನ್ನೆಲೆ ಅಂತಿಮ ದರ್ಶನ ಪಡೆಯಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತೆ ಎಂದು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ವಿರೋಧ ಪಕ್ಷದವರು ಏನು ಬೇಕಾದರೂ ಹೇಳ್ತಾರೆ. ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಕಲಬುರಗಿಗೆ ಬಂದು ಚೌಹಾಣ್ ಏನೇನೋ ಮಾತಾಡಿ ಹೋಗೊದಲ್ಲ. 371ಜೆ ಈ ಭಾಗಕ್ಕೆ ತಂದಿದ್ದೇವೆ. ರಾಜ್ಯ ಸರ್ಕಾರದಿಂದ ಐದು ಸಾವಿರ ಕೋಟಿ ಕೊಡಲಾಗುತ್ತಿದೆ. ಕೆಕೆಆರ್ಡಿಬಿಗೆ ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ಕೊಡಿಸಲು ಹೇಳಿ ಚವ್ಹಾಣ್ಗೆ ಸುಮ್ಮನೆ ಮಾತಾಡಿ ಹೋಗೊದಲ್ಲ, ನಿಮ್ಮ ಅಸ್ಥಿತ್ವವೇ ನಿಮಗೆ ಗೊತ್ತಿಲ್ಲ ಅಂದ್ರೆ ನಮಗ್ಯಾಕೆ ಟೀಕೆ ಮಾಡ್ತೀರಾ?'' ಎಂದು ಟಾಂಗ್ ನೀಡಿದರು.
ಅರಬ್ಬಿ ಸಮುದ್ರದಲ್ಲಿ ಪ್ರಧಾನಿ ಮೋದಿ ಪೂಜೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ನವಿಲುಗರಿ ಅಲ್ಲಿ ಹಾಕಿದ್ರೆ ಅಲ್ಲಿ ಬೆಳೆಯುತ್ತೆ ಏನೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ, ನವೀಲುಗರಿ ಅಲ್ಲಿ ಬೆಳೆಯುತ್ತಾ ಗೊತ್ತಿಲ್ಲ. ನಾನು ನಂಬಿಕೆ ಇಟ್ಟಿರೋದು ನಿಸರ್ಗ ನಿಯಮದ ಪ್ರಕಾರ ನಡೆಯಬೇಕು. ನಿಸರ್ಗದ ವಿರುದ್ದ ಯಾರಿಗೂ ಕೂಡ ಯಶಸ್ಸು ಸಿಗೋದಿಲ್ಲ, ಇದೆ ಬುದ್ದನ ತತ್ವ ಸಿದ್ದಾಂತ'' ಎಂದರು.