ಬೆಂಗಳೂರು: ಕೊಡಿಗೇಹಳ್ಳಿಯಿಂದ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ಗುಪ್ತಾ ಎಂಬವರನ್ನು ನೋಯ್ಡಾದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇಶಮುಂಡನ ಮಾಡಿಸಿಕೊಂಡಿದ್ದ ಆತನನ್ನು ಪೊಲೀಸರು ನಗರಕ್ಕೆ ಕರೆತರಲಾಗಿದೆ.
ಮನೆಯಿಂದ ತನ್ನ ಬೈಕ್‌ನಲ್ಲಿ ತಿರುಪತಿಗೆ ತೆರಳಿದ್ದ ವಿಪಿನ್, ಅಲ್ಲಿ ಕೇಶಮುಂಡನ ಮಾಡಿಸಿಕೊಂಡು ನಂತರ ನೋಯ್ಡಾಗೆ ತೆರಳಿದ್ದರು. "ನಾನೇ ಮನೆ ಬಿಟ್ಟು ಹೋಗಿದ್ದೇನೆ, ಮನೆಗೆ ಮಾತ್ರ ಹೋಗಲಾರೆ" ಎಂದು ಆತ ಪೊಲೀಸರ ಮುಂದೆ ಅಳಲು ತೋಡಿಕೊಂಡಿರುವ ಪ್ರಸಂಗವೂ ನಡೆದಿದೆ. ವಿಪಿನ್ ಗುಪ್ತಾ ಹಾಗೂ ಅವರ ಪತ್ನಿಯ ನಡುವೆ 8 ವರ್ಷಗಳ ವಯಸ್ಸಿನ ಅಂತರವಿದೆ.
"ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನನ್ನನ್ನು ನಿಯಂತ್ರಿಸಲೆಂದೇ ಮನೆಗೆ ಸಿಸಿಟಿವಿ ಕ್ಯಾಮರಾ ಹಾಕಿಸಿದ್ದಾಳೆ. ಆಕೆಯ ಕಾಟದಿಂದ ನೊಂದು ಮನೆ ಬಿಟ್ಟು ಬಂದೆ" ಎಂದು ವಿಪಿನ್ ಹೇಳಿರುವುದಾಗಿ ಪೊಲೀಸರ ಮಾಹಿತಿ ನೀಡಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ವಿಪಿನ್ ಗುಪ್ತಾ, ಕೊಡಿಗೇಹಳ್ಳಿಯ ಟಾಟಾನಗರದಲ್ಲಿ ಪತ್ನಿಯೊಂದಿಗೆ ವಾಸವಿದ್ದರು. ಆಗಸ್ಟ್ 4ರಂದು ಮಧ್ಯಾಹ್ನ ಮನೆಯಿಂದ ಹೋಗಿದ್ದ ಅವರು ಮರಳಿರಲಿಲ್ಲ. ಏಕಾಂಗಿಯಾಗಿ ಆಗಾಗ ಬೈಕ್ ರೈಡ್ ಹೋಗುವ ಹವ್ಯಾಸ ಹೊಂದಿದ್ದರಿಂದ ಮನೆಗೆ ಬರಬಹುದು ಎಂದು ಪತ್ನಿ ಕಾದಿದ್ದರು. ಆದರೆ ಫೋನ್ ಸಹ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ಪತಿಯನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲೂ ವಿಡಿಯೋ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ನಾಪತ್ತೆ: ಹುಡುಕಿಕೊಡುವಂತೆ ಪತ್ನಿ ಮನವಿ - Techie Goes Missing