ಬೆಂಗಳೂರು: ನಿಯಮ ಉಲ್ಲಂಘನೆ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕಾ ಘಟಕಗಳನ್ನು ಮುಚ್ಚಲು ಅಂತಿಮ ಆದೇಶ ನೀಡಿದ್ದಾಗ್ಯೂ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಹ ಘಟಕಗಳ ಮಾಲೀಕರು ಮತ್ತು ಪ್ರಾದೇಶಿಕ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟೇರಿಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಈಶ್ವರ ಖಂಡ್ರೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಇಂತಹ ಘಟಕಗಳು ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಬೆಂಗಳೂರಿನ ಬೆಳ್ಳಂದೂರು, ವರ್ತೂರು, ಮಹದೇವಪುರ ಕೆರೆಗಳಲ್ಲಿ ಕಲುಷಿತ ತ್ಯಾಜ್ಯ ನೀರು ಈಗಲೂ ಹರಿಯುತ್ತಿದೆ. ಇಲ್ಲಿ ಎಸ್ಟಿಪಿ ಅಳವಡಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ಗಡುವು ಈ ವರ್ಷ ಡಿಸೆಂಬರ್‌ಗೆ ಅಂತ್ಯವಾಗಲಿದೆ. ಸ್ಥಳೀಯ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ತುರ್ತು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೆಂಗಳೂರಿನ ಬೃಹತ್ ಸಮುಚ್ಚಯಗಳಿಂದ ಬರಬೇಕಾದ ಪರಿಸರ ಹಾನಿ ಪರಿಹಾರ ಮೊತ್ತದ ಬಾಕಿ 286 ಕೋಟಿ ರೂಪಾಯಿ ಇದ್ದು, ಕೂಡಲೇ ಇದನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ರಾಜ್ಯದಲ್ಲಿ ವೈದ್ಯಕೀಯ ತ್ಯಾಜ್ಯದ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಚರ್ಚಿಸಿದ ಸಚಿವರು ಕೆಲವೇ ಕೆಲವು ಕಂಪನಿಗಳು ಸಾರ್ವಭೌಮತ್ವ ಸ್ಥಾಪಿಸಿ ಆಸ್ಪತ್ರೆಗಳಿಗೆ ಕಿರುಕುಳ ನೀಡಬಾರದು. ಈ ನಿಟ್ಟಿನಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆ ಸಾಗಾಟ ಮತ್ತು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಯಾಗುತ್ತಿದೆಯೇ ಎಂಬ ಬಗ್ಗೆ ಖುದ್ದು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.