ಸಿಎಂ ಸಿದ್ದರಾಮಯ್ಯ (ETV Bharat) ಬೆಳಗಾವಿ: "ಮುಡಾ ಹಗರಣದಲ್ಲಿ ಒತ್ತುವರಿ ಮಾಡಿದ ಜಮೀನು ಏನು ಮಾಡಬೇಕು. ಆ ಜಮೀನು ಕುಮಾರಸ್ವಾಮಿ ಅವರದ್ದಾ..? ನಾನು ಸ್ಪೆಷಲ್ ಕಮಿಷನ್ ರಚನೆ ಮಾಡಿರುವೆ. ಕುಮಾರಸ್ವಾಮಿ ಅಲ್ಲಿ ಹೋಗಿ ಏನಾದರೂ ದಾಖಲೆ ಇದ್ದರೆ ಕೊಡಲಿ" ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದರು.
ಸಿಎಂ ತಮ್ಮ ಕಾರಿನಲ್ಲಿ ದಾಖಲೆ ಇಟ್ಟುಕೊಂಡು ಓಡಾಡ್ತಿದ್ದಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಿರುಗೇಟು ನೀಡಿದ ಅವರು, "ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ನನ್ನ ಕಾರಲ್ಲಿ ಇದ್ದರೆ ನೋಡಲಿ. ನನ್ನ ಹೆಂಡ್ತಿ ಗಮನಕ್ಕೆ ತರದೇ ನಮ್ಮ ಭೂಮಿಯನ್ನು ಲೇಔಟ್ ಮಾಡಿ ಹಂಚಿದ್ದಾರೆ. ಅದನ್ನು ಹಂಚಿದವರು ಯಾರು? ಆಗ ಅಧ್ಯಕ್ಷರಾಗಿದ್ದವರು ಯಾರು? ಬಿಜೆಪಿಯವರೇ ತಾನೇ. 3 ಎಕರೆ 16 ಗುಂಟೆ ನಮ್ಮ ಜಮೀನು ಹೋಗಿದೆ. ಅದನ್ನು ಹಾಗೇ ಸುಮ್ಮನೆ ಬಿಡೋದಿಕ್ಕೆ ಆಗುತ್ತಾ?" ಎಂದು ಪ್ರಶ್ನಿಸಿದರು.
"ನಾನು ಕುಮಾರಸ್ವಾಮಿ ಅವರನ್ನು ಜೈಲಿಗೆ ಅಟ್ಟುತ್ತೇನೆ ಅಂತಾ ಹೇಳಲಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ರೆ ಆಗ ಏನೂ ಮಾಡುತ್ತಾರೆ. ಸಿದ್ದರಾಮಯ್ಯ ಅವರಂತಹ ನೂರು ಜನ ಬಂದರೂ ನನ್ನ ಅರೆಸ್ಟ್ ಮಾಡಲು ಆಗಲ್ಲ ಅಂದಿದ್ದರು. ಆಗ ನಾನು ಹೆಚ್‌ಡಿಕೆ ಬಂಧಿಸಲು ಒಬ್ಬ ಕಾನ್ಸ್ಟೇಬಲ್ ಸಾಕು ಅಂತಾ ಹೇಳಿರುವೆ" ಎಂದು ಸಿದ್ದರಾಮಯ್ಯ ಕುಟುಕಿದರು.
"ಕುಮಾರಸ್ವಾಮಿ ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್ ಮಾಡುತ್ತಾರೆ. ಕುಮಾರಸ್ವಾಮಿ ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಮುಡಾ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆಗೆ ಬರೋ ವಿಚಾರ ಆಮೇಲೆ ಮಾತಾಡುತ್ತೇನೆ" ಎಂದು ಹೇಳಿ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಶಿಶುಪಾಲನ ಹಾಗೆ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy